ಐಐಟಿ ಮದ್ರಾಸ್​ನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

ಈ ತಿಂಗಳ ಆರಂಭದಲ್ಲಿ, ಆತ್ಮಹತ್ಯೆಯಿಂದ ಸಾವನ್ನಪ್ಪಿದ ಐಐಟಿ-ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ತಂದೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪತ್ರ ಬರೆದು ಜಾತಿ ತಾರತಮ್ಯದ ಕೋನದಿಂದ ಪ್ರಕರಣವನ್ನು ತನಿಖೆ ಮಾಡುವಂತೆ ಮನವಿ ಮಾಡಿದ್ದರು.

ಐಐಟಿ ಮದ್ರಾಸ್​ನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ
ಐಐಟಿ ಮದ್ರಾಸ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 21, 2023 | 7:25 PM

ಚೆನ್ನೈ: ಚೆನ್ನೈನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ (IIT Madras) ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿಯ ಮೃತದೇಹವೊಂದು ಪತ್ತೆಯಾಗಿದ್ದು, ಇದು ಆತ್ಮಹತ್ಯೆ (Suicide) ಪ್ರಕರಣ ಎಂದು ಶಂಕಿಸಲಾಗಿದೆ. ಮಹಾರಾಷ್ಟ್ರ ಮೂಲದ ಕೆಮಿಕಲ್ ಎಂಜಿನಿಯರಿಂಗ್ ಎರಡನೇ ವರ್ಷ ಪದವಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ವೇಳೆ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರ ತನಿಖೆಯಿಂದ ಸಾಬೀತಾದರೆ, ಪ್ರಸ್ತುತ ಸಂಸ್ಥೆಯಲ್ಲಿ ಈ ವರ್ಷ ದಾಖಲಾದ ನಾಲ್ಕನೇ ಆತ್ಮಹತ್ಯೆ ಪ್ರಕರಣವಾಗಲಿದೆ ಇದು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ಚೆನ್ನೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ, ಆತ್ಮಹತ್ಯೆಯಿಂದ ಸಾವನ್ನಪ್ಪಿದ ಐಐಟಿ-ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ತಂದೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪತ್ರ ಬರೆದು ಜಾತಿ ತಾರತಮ್ಯದ ಕೋನದಿಂದ ಪ್ರಕರಣವನ್ನು ತನಿಖೆ ಮಾಡುವಂತೆ ಮನವಿ ಮಾಡಿದ್ದರು.

ಪತ್ರದಲ್ಲಿ ದರ್ಶನ್ ಸೋಲಂಕಿ ಅವರ ತಂದೆ ರಮೇಶ್ ಅವರು ತಮ್ಮ ಮಗ ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಜಾತಿಯ ಕಾರಣಕ್ಕಾಗಿ ಕಿರುಕುಳವನ್ನು ಎದುರಿಸಿದ್ದಾನೆ ಎಂದು ಹೇಳಿದ್ದಾರೆ. ತನ್ನ ಮಗನ ಎಲೆಕ್ಟ್ರಾನಿಕ್ ಸಾಧನಗಳ ಕ್ಲೋನ್ ಪ್ರತಿಗಳನ್ನು ಕುಟುಂಬಕ್ಕೆ ಹಿಂತಿರುಗಿಸಬೇಕೆಂದು ತಂದೆ ಒತ್ತಾಯಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಐಐಟಿ-ಮದ್ರಾಸ್‌ನ 32 ವರ್ಷದ ಪಿಎಚ್‌ಡಿ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ,ಆತ ಪಶ್ಚಿಮ ಬಂಗಾಳ ಮೂಲದವನು.

ಅದಕ್ಕೂ ಮುನ್ನ ಮಾರ್ಚ್‌ನಲ್ಲಿ ಇದೇ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆಂಧ್ರಪ್ರದೇಶದ ನಿವಾಸಿಯಾಗಿದ್ದ ಆತನಿಗೆ 20 ವರ್ಷ ವಯಸ್ಸಾಗಿತ್ತು.

ಫೆಬ್ರವರಿಯಲ್ಲಿ, ಮಹಾರಾಷ್ಟ್ರದ ಸಂಶೋಧನಾ ವಿದ್ಯಾರ್ಥಿಯೊಬ್ಬರು  ಐಐಟಿ-ಮದ್ರಾಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ