ಶಿವಮೊಗ್ಗ: ಚಲಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಬೆಂಕಿ ಹತ್ತಿ ಉರಿದಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದಿದೆ. ಮೊದಲಿಗೆ ಬ್ಯಾನೆಟ್ ನಲ್ಲಿ ಕಪ್ಪು ಹೊಗೆ ಕಾಣಿಸಿಕೊಂಡಿತ್ತು. ನಂತರ ಇಡೀ ವಾಹನ ಬೆಂಕಿಗೆ ಆಹುತಿ ಆಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಸೊರಬ ತಾಲೂಕು ಚಿಕ್ಕಚೌಟಿಯಿಂದ ಆನವಟ್ಟಿಗೆ ಹೊರಟಿದ್ದ ರಾಜು ಎಂಬುವರ ಸ್ವಿಫ್ಟ್ ಡಿಸೈರ್ ವಾಹನ ಈ ಅಗ್ನಿ ಅವಗಡದಲ್ಲಿ ಆಹುತಿಯಾಗಿದೆ. ಮೊದಲಿಗೆ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಾಜು ಅವರೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದು ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಿದ್ದಾರೆ.
ಕಾರು ನಿಲ್ಲಿಸಿದ ಕ್ಷಣ ಮಾತ್ರದಲ್ಲಿ ಇಡೀ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಧಗ ಧಗನೇ ಬೆಂಕಿಗೆ ವಾಹನ ಸಂಪೂರ್ಣ ಹೊತ್ತಿ ಉರಿದಿದೆ. ಅಕ್ಕ ಪಕ್ಕದ ತೋಟದ ಮನೆಯವರು ಬಂದು ಬೆಂಕಿ ಆರಿಸಲು ಯತ್ನಿಸಿದ್ದಾರೆ.
ಆದರೆ ಬೆಂಕಿ ನಂದಿಸುವ ಕಾರ್ಯದಿಂದ ಯಾವುದೇ ಪ್ರಯೋಜನವಾಗಿಲ್ಲ. ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಜು ಅವರು ಉಳ್ಳಿ ಗ್ರಾಮಸ್ಥರಾಗಿದ್ದು ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿದ್ದಾರೆ. ಸ್ವಿಫ್ಟ್ ಡಿಸೈರ್ ಖರೀದಿಸಿ ಕೇವಲ ಒಂದೂವರೆ ವರ್ಷ ಕಳೆದಿದೆ. ಅದನ್ನು ಹೊಸ ಕಾರ್ ಎಂದರೂ ತಪ್ಪಾಗಲಾರದು. ಹೊಸ ವಾಹನವೇ ಹೀಗೆ ಬೆಂಕಿಗೆ ಆಹುತಿ ಆಗಿರುವುದು ಆಶ್ಚರ್ಯ ಹಾಗೂ ಆತಂಕವನ್ನೂ ಮೂಡಿಸಿದೆ. ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಬೆಂಜ್ ಕಾರು; ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು
ಇದನ್ನೂ ಓದಿ: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಕುಡಿದು ಪುಂಡಾಟ, ಕಾರು ಅಪಘಾತ; ಬಂಧಿಸಿ ಜೈಲಿಗಟ್ಟಿದ ಪೊಲೀಸರು
Published On - 9:56 pm, Fri, 3 September 21