ಮುಸ್ಲಿಂ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಶಿವಮೊಗ್ಗದ ಶಿಕ್ಷಕಿ ಎತ್ತಂಗಡಿ, ತನಿಖೆ ಆರಂಭ
ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರ ತರಗತಿಯಲ್ಲಿ ವಿದ್ಯಾರ್ಥಿಗಳು ಜಗಳವಾಡುತ್ತಿದ್ದನ್ನು ಕಂಡ ಶಿಕ್ಷಕಿ ಕೋಪಗೊಂಡು ನೀವು ಪಾಕಿಸ್ತಾನಕ್ಕೆ ಹೋಗಿ, ಇದು ಹಿಂದೂಗಳ ದೇಶ ಎಂದು ಹೇಳಿದ್ದರಂತೆ. ಸದ್ಯ ಶಿಕ್ಷಣ ಇಲಾಖೆ ಶಿಕ್ಷಕಿ ಮಂಜುಳಾ ದೇವಿಯನ್ನು ವರ್ಗಾವಣೆ ಮಾಡಿದೆ.
ಶಿವಮೊಗ್ಗ: ಐದನೇ ತರಗತಿಯ ಇಬ್ಬರು ಮುಸ್ಲಿಂ (Muslim) ವಿದ್ಯಾರ್ಥಿಗಳಿಗೆ (Students) “ಪಾಕಿಸ್ತಾನಕ್ಕೆ ಹೋಗಿ” ಎಂದು ಹೇಳುವ ಮೂಲಕ ಶಿಕ್ಷಕಿಯೊಬ್ಬರು (Teacher) ಸಂಕಷ್ಟಕ್ಕೆ ಸಿಲುಕಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಶಿಕ್ಷಣ ಇಲಾಖೆ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಗುರುವಾರ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಬ್ಬರು ಜಗಳವಾಡುತ್ತಿದ್ದರು. ಇದಕ್ಕೆ ಕೋಪಗೊಂಡ ಶಿಕ್ಷಕಿ ಮಂಜುಳಾ ದೇವಿ ನೀವು ಪಾಕಿಸ್ತಾನಕ್ಕೆ ಹೋಗಿ, ಇದು ಹಿಂದೂಗಳ ದೇಶ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದರಂತೆ.
ಈ ವಿಚಾರವನ್ನು ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ನಂತರ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎ ನಜ್ರುಲ್ಲಾ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (DDPI) ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಲಾಖೆಯು ಶಿಕ್ಷಕಿಯನ್ನು ವರ್ಗಾವಣೆ ಮಾಡಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್ (ಇಂಗ್ಲಿಷ್) ವರದಿ ಮಾಡಿದೆ.
ಇನ್ನು ಘಟನೆಯ ಬಗ್ಗೆ ತನಿಖೆ ನಡೆಸಲು ಬಿಇಒ ಬಿ.ನಾಗರಾಜ್ ಅವರು ಶಾಲೆಗೆ ತೆರಳಿದ ವೇಳೆ, ಈ ಘಟನೆಯ ಬಗ್ಗೆ ತರಗತಿಯ ಇತರ ವಿದ್ಯಾರ್ಥಿಗಳು ಕೂಡ ತಿಳಿಸಿದ್ದಾರೆ. “ಇದು ನಿಮ್ಮ ದೇಶವಲ್ಲ, ಇದು ಹಿಂದೂಗಳ ದೇಶ. ನೀವು ಪಾಕಿಸ್ತಾನಕ್ಕೆ ಹೋಗಬೇಕು. ನೀವು ಎಂದೆಂದಿಗೂ ನಮ್ಮ ಗುಲಾಮರು” ಅಂತ ಶಿಕ್ಷಕಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ ಎಂದು ನಾಗರಾಜ ಹೇಳಿದರು.
ಘಟನೆಯ ಕುರಿತು ವರದಿ ಸಲ್ಲಿಸಿದ್ದು, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 3 September 23