
ಶಿವಮೊಗ್ಗ, ಜನವರಿ 14: ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ಪ್ರಕಾರ, ಕಾರಿನಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ, ಮದುವೆ ಮುಗಿಸಿಕೊಂಡು ಶೃಂಗೇರಿಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತದ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.
ದಾವಣಗೆರೆಯ ನ್ಯಾಮತಿ ತಾಲೂಕಿನ ಚೀಲೂರು ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಂತೋಷ್ (38) ಎಂಬವರು ಮೃತಪಟ್ಟಿದ್ದಾರೆ. ಸಂತೋಷ್ ಗ್ರಾಪಂ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣ ಸಾವು; ಮೂವರು ಗಂಭೀರ
ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಕ್ಕ ಪಾರ್ವತಿಭಾಯಿ(27), ತಮ್ಮ ಪಾಂಡು ನಾಯಕ್(26) ಮೃತಪಟ್ಟಿದ್ದಾರೆ.
Published On - 8:14 am, Wed, 14 January 26