ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ (Harsha) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದಲ್ಲಿ ನಿನ್ನೆ (ಫೆಬ್ರವರಿ 20) ಹರ್ಷ ಎಂಬಾತನ ಕೊಲೆ ನಡೆದಿತ್ತು. ಘಟನೆ ಹಿನ್ನೆಲೆ ಇಂದು ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹರ್ಷ ಮೃತದೇಹ ಕೊಂಡೊಯ್ಯುವ ವೇಳೆ ಕೂಡ ಗಲಭೆ ಏರ್ಪಟ್ಟಿತ್ತು. ಘಟನೆ ಹಿನ್ನೆಲೆ ಪೊಲೀಸರು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.
ಬಜರಂಗದಳದ ಕಾರ್ಯಕರ್ತನಾದ ಹರ್ಷ, 28 ವರ್ಷ, ಕುಂಬಾರ ಬೀದಿ, ಸೀಗೆಹಟ್ಟಿ, ಶಿವಮೊಗ್ಗ ಈತನು ದಿನಾಂಕ 20-02-2022 ರಂದು ರಾತ್ರಿ ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆ, ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0077/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ. ಸದರಿ ಪ್ರಕರಣದ ವಿಶೇಷ ತನಿಖಾ ತಂಡವು ದಿನಾಂಕ 21-02-2022 ರಂದು ಸದರಿ ಪ್ರಕರಣದ ಆರೋಪಿತರಾದ ಖಾಸಿಫ್, 30 ವರ್ಷ, ಬುದ್ಧಾನಗರ, ಶಿವಮೊಗ್ಗ ಟೌನ್ ಮತ್ತು ಸೈಯ್ಯದ್ ನಧೀಂ, 20 ವರ್ಷ, ಜೆಪಿ ನಗರ, ಶಿವಮೊಗ್ಗ ಟೌನ್ ರವರುಗಳನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹರ್ಷ ಕುಟುಂಬಕ್ಕೆ ಶಾಸಕ ರೇಣುಕಾಚಾರ್ಯ ಧನಸಹಾಯ
ದಾವಣಗೆರೆ: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ 2 ಲಕ್ಷ ರೂ. ಧನಸಹಾಯ ಮಾಡಿದ್ದಾರೆ. ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಶಿವಮೊಗ್ಗ ಭದ್ರತೆಗೆ ಬೆಂಗಳೂರಿನ ಪೊಲೀಸರ ನಿಯೋಜನೆ ಮಾಡಲಾಗಿದೆ. 212 ಪೊಲೀಸರನ್ನ ರಾಜ್ಯ ಸರ್ಕಾರ ಭದ್ರತೆಗೆ ನಿಯೋಜಿಸಿದೆ. ನಾಲ್ವರು ಪಿಐ, 8 PSI, 200 ಹೆಚ್ಸಿ, ಪಿಸಿ ನಿಯೋಜನೆ ಮಾಡಲಾಗಿದೆ. ಎಡಿಜಿಪಿ ಎಸ್.ಮುರುಗನ್ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು.
ಶಿವಮೊಗ್ಗದಲ್ಲಿ 1,200 ಪೊಲೀಸ್ ಸಿಬ್ಬಂದಿ ಇದ್ದಾರೆ. ಬೆಂಗಳೂರಿನಿಂದಲೂ 200 ಸಿಬ್ಬಂದಿ ಕಳುಹಿಸಲಾಗಿದೆ. ಹರ್ಷ ಹತ್ಯೆಯಲ್ಲಿ ಐವರು ಭಾಗಿಯಾಗಿರುವ ಮಾಹಿತಿಯಿದೆ. ಮತ್ತೆ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಯಾವುದೇ ಸಂಘಟನೆ ನಿಷೇಧಿಸುವ ಬಗ್ಗೆ ನಿರ್ಧರಿಸಿಲ್ಲ. ಅದಕ್ಕೆ ಕಾನೂನು ಪ್ರಕ್ರಿಯೆಗಳಿವೆ, ಮುಂದೆ ನೋಡೋಣ. ಸಮಯಾವಕಾಶ ನೋಡಿಕೊಂಡು ಸಂಘಟನೆ ನಿಷೇಧಿಸುತ್ತೇವೆ. ಯಾವುದನ್ನೂ ಬಾಯಿಬಿಟ್ಟು ಹೇಳುವಂತಹ ಸ್ಥಿತಿಯಲ್ಲಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ:
ಶಿವಮೊಗ್ಗ: ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ, ಫೆ.23 ರ ಮುಂಜಾನೆವರೆಗೆ ಕರ್ಫ್ಯೂ ಜಾರಿ
ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ದಾನ ಮಾಡಿದ ತಾಯಿ
Published On - 10:28 pm, Mon, 21 February 22