ಕೋವಿಡ್ ಹಗರಣ ತನಿಖಾ ವರದಿ ಮಾತ್ರವಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ: ಕುಮಾರಸ್ವಾಮಿ

| Updated By: Ganapathi Sharma

Updated on: Sep 05, 2024 | 11:31 AM

ಕೋವಿಡ್ ಹಗರಣದ ತನಿಖಾ ವರದಿ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ ಎಂಬ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು (ಕಾಂಗ್ರೆಸ್​ನವರು) ಕೆಂಪಣ್ಣ ಆಯೋಗದ ವರದಿಯನ್ನು ಯಾಕೆ ಬಿಟ್ಟಿದ್ದಾರೆ? ಅದರ ಬಗ್ಗೆಯೂ ಚರ್ಚಿಸಲಿ ಎಂದಿದ್ದಾರೆ.

ಕೋವಿಡ್ ಹಗರಣ ತನಿಖಾ ವರದಿ ಮಾತ್ರವಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ: ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ಶಿವಮೊಗ್ಗ, ಸೆಪ್ಟೆಂಬರ್ 5: ಕೋವಿಡ್​ ಹಗರಣದ ತನಿಖಾ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಸಂಪುಟದಲ್ಲಿ ಚರ್ಚೆಯಾಗಲಿದೆ ಎಂದು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅದನ್ನು (ಕೆಂಪಣ್ಣ ಆಯೋಗದ ವರದಿ) ಏಕೆ ಕ್ಯಾಬಿನೆಟ್ ಮುಂದೆ ತರದೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಮುಡಾ ಹಿಂದಿನ ಆಯುಕ್ತ ದಿನೇಶ್​ ಕುಮಾರ್ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕೋರ್ಟ್​​ನಲ್ಲಿ ಈ ಪ್ರಕರಣದ ಬಗ್ಗೆ ವಾದ ಪ್ರತಿವಾದ ಆಗಿದೆ. ಸಿಎಂ ಪರ ವಕೀಲರು ವಾದ ಮಾಡಲು ಸಮಯ ಕೇಳುತ್ತಿದ್ದಾರೆ ಎಂದರು.

ನಾಡಿಗೆ ಅನೇಕ ಕೊಡುಗೆಗಳನ್ನು ಎನ್​​ಯು ಆಸ್ಪತ್ರೆ ಕೊಟ್ಟಿದೆ. ಶಿವಮೊಗ್ಗದಲ್ಲಿ ಹಲವಾರು ಕುಟುಂಗಳಿಗೆ ಯಶಸ್ವಿಯಾಗಿ ಕಿಡ್ನಿ‌ ಕಸಿ ಮಾಡಿದ್ದಾರೆ. ಶಿವಮೊಗ್ಗಕ್ಕೆ ಇಂತಹ‌ ಒಂದು ಆಸ್ಪತ್ರೆ ಅವಶ್ಯಕವಾಗಿತ್ತು. ಇಲ್ಲವಾದರೆ ಬೆಂಗಳೂರು ಅಥವಾ ಮಂಗಳೂರಿಗೆ ಆಸ್ಪತ್ರೆಗೆ ಹೋಗಬೇಕಿತ್ತು. ಇದೀಗ ಆ ಸೌಲಭ್ಯ ಶಿವಮೊಗ್ಗದಲ್ಲಿ ದೊರೆಯುತ್ತಿದೆ ಎಂದರು.

ಇತ್ತೀಚೆಗೆ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಬಹಳ ಸಂಖ್ಯೆಯಲ್ಲಿದ್ದಾರೆ. ಕಿಡ್ನಿ ಸಮಸ್ಯೆಗೆ ಒಳಗಾದವರಿಗೆ ಕುಟುಂಬದವರು ಯಾರಾದರೂ ಕಿಡ್ನಿ ದಾನ ಮಾಡಬಹುದು. ಆದರೆ ಆ ಕಿಡ್ನಿ ಮ್ಯಾಚ್ ಆಗಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಅಂಗಾಂಗ ಚಿಕಿತ್ಸೆಗೆ 30 ಕೋಟಿ ರೂ. ಹಣ ಇಟ್ಟಿದ್ದೆ. ಆದರೆ, ತದನಂತರ ಅದರ ಬಗ್ಗೆ ಯಾರೂ ಗಮನ ಕೊಡಲಿಲ್ಲ. ಆ ಹಣ ಏನಾಯ್ತೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವೆ -ಸಿ.ಪಿ. ಯೋಗೇಶ್ವರ್

ಇಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆ ಶುಭಾಶಯ ಕೋರುತ್ತೇನೆ. ನಾಳೆ ನಾಡಿದ್ದು ಗೌರಿ ಗಣೇಶ ಹಬ್ಬ ಇದೆ ಎಂದ ಕುಮಾರಸ್ವಾಮಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಹೇಳಿದರು.

ಇಂದು ಸಚಿವ ಸಂಪುಟ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸಚಿವ ಸಂಪುಟ ಸಭೆ ನಡೆಯಲಿದೆ. ಇದೇ ವೇಳೆ ಕೋವಿಡ್ ಹಗರಣ ಸಂಬಂಧ ಸಲ್ಲಿಕೆಯಾಗಿರುವ ವರದಿಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ