ಹಣ ದುರ್ಬಳಕೆ: ಲೋಕಾಯುಕ್ತಕ್ಕೆ ದೂರು ನೀಡ್ತಿದ್ದಂತೆ ನಾಲ್ವರು ಶಿವಮೊಗ್ಗ ಮಾಜಿ ಪಾಲಿಕೆ ಸದಸ್ಯರಿಂದ ಹಣ ವಾಪಸ್
ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ತಮ್ಮ ಅವಧಿಯಲ್ಲಿ ವೈಯಕ್ತಿಕ ಚಿಕಿತ್ಸೆ ವೆಚ್ಚಕ್ಕಾಗಿ ಪಾಲಿಕೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಯಮಗಳ ಉಲ್ಲಂಘನೆ ಮಾಡಿ ಪಾಲಿಕೆ ಮಾಜಿ ಸದಸ್ಯರು ವೈದ್ಯಕೀಯ ವೆಚ್ಚಕ್ಕಾಗಿ ಹಣ ಬಳಕೆ ಮಾಡಿಕೊಂಡು ಈಗ ಇಕ್ಕಟ್ಟಿಗೆ ಸಿಲುಕಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ.
ಶಿವಮೊಗ್ಗ, ಸೆ.04: ಪಾಲಿಕೆ ಸದಸ್ಯರು ತಮ್ಮ ಅವಧಿಯಲ್ಲಿ ವೈದ್ಯಕೀಯ ವೆಚ್ಚಕ್ಕೆಂದು ಪಾಲಿಕೆಯ ಹಣ ದುರುಪಯೋಗ ಮಾಡಿಕೊಂಡಿದ್ದರು. ಇದರ ವಿರುದ್ದ ಸಾರ್ವಜನಿಕರು ಲೋಕಾಯುಕ್ತ(Lokayukta)ಕ್ಕೆ ದೂರು ನೀಡಿದ್ದರು. ಹೌದು, 2020-2023 ಅವಧಿಯ 35 ಪಾಲಿಕೆಯ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರಂತೆ. ಸಾಮಾನ್ಯ ಸಭೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವೈದ್ಯಕೀಯ ವೆಚ್ಚಕ್ಕೆಂದೆ 40 ಲಕ್ಷ ಹಣವನ್ನು ಎಲ್ಲ ಪಕ್ಷದ ಪಾಲಿಕೆಯ ಸದಸ್ಯರು ಮೀಸಲು ಇಟ್ಟಿದ್ದರು. ಅದರಂತೆ 35 ಸದಸ್ಯರು ಲಕ್ಷಾಂತರ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ದ ಲೋಕಾಯುಕ್ತಕ್ಕೆ ದೂರು ಹೋಗುತ್ತಿದ್ದಂತೆ ಮಾಜಿ ಸದಸ್ಯರಾದ ಎನ್.ಎಸ್ ಮಂಜುನಾಥ್, ಆರ್ ಸಿ ನಾಯ್ಕ, ಶಂಕರ ಗನ್ನಿ, ಪ್ರಭಾಕರ್ ಎಂಬ ನಾಲ್ವರು ಹಣ ವಾಪಸ್ ಪಾಲಿಕೆಗೆ ಸಂದಾಯ ಮಾಡಿದ್ದಾರೆ.
ಇನ್ನು ಈಗಾಗಲೇ ವೈದ್ಯಕೀಯ ವೆಚ್ಚಕ್ಕೆ ಶಾಮೀರ್ ಖಾನ್ 49,581, ರಾಜು ಎಸ್.ಜಿ 1,08,523, ಮಂಜುಳ ಶಿವಣ್ಣ 17,904 ಹಣವನ್ನು ವಾಪಸ್ ಪಾವತಿಸಿಲ್ಲ. ಹೀಗೆ ಕಳೆದ ಅವಧಿಯ ಯಾವೆಲ್ಲ ಪಾಲಿಕೆಯ ಸದಸ್ಯರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಅಂತವರಿಗೆ ಬರುವ ಪಾಲಿಕೆಯ ಚುನಾವಣೆಗೆ ಅನರ್ಹಗೊಳಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಪ್ರಮುಖರು ಸರಕಾರಕ್ಕೆ ಮತ್ತು ಚುನಾವಣೆ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಸಾವು; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಶಿವಮೊಗ್ಗ ಮಹಾನಗರ ಪಾಲಿಕೆಯ ಕಳೆದ ಅವಧಿಯ ಎಲ್ಲ ಪಕ್ಷದ ಪಾಲಿಕೆಯ ಸದಸ್ಯರು ವೈದ್ಯಕೀಯ ವೆಚ್ಚದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಸದ್ಯ ಇದರ ವಿರುದ್ದ ಮಾಜಿ ಪಾಲಿಕೆಯ ಸದಸ್ಯರೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ಸದಸ್ಯರಿಗೆ ಈ ರೀತಿ ವೈದ್ಯಕೀಯ ವೆಚ್ಚ ಪಾಲಿಕೆಯಿಂದ ಭರಿಸುವ ಯಾವುದೇ ಸೌಲಭ್ಯ ಮತ್ತು ನಿಯಮಗಳಿಲ್ಲ. ಆದ್ರೆ, ಕಳೆದ ಅವಧಿಯ ಕೆಲ ಪಾಲಿಕೆಯ ಸದಸ್ಯರು ವೈದ್ಯಕೀಯ ವೆಚ್ಚಕ್ಕೆ ಅನುದಾನ ಬಳಿಕೆ ಮಾಡಿಕೊಂಡಿದ್ದಾರೆ. ಸದ್ಯ ನಾಲ್ವರು ಸದಸ್ಯರು ಹಣ ವಾಪಸ್ ಜಮಾ ಮಾಡಿದ್ದಾರೆ. ಇನ್ನೂ ಮೂವರು ಪಾಲಿಕೆ ಸದಸ್ಯರು ಹಣ ಜಮಾ ಮಾಡಬೇಕಿದೆ. ಇವರಂತೆ ಇನ್ನಿತರ ಸದಸ್ಯರು ಹಣ ಬಳಕೆ ಮಾಡಿದರೆ ಅದನ್ನು ವಾಪಸ್ ಪಾಲಿಕೆಗೆ ಜಮಾ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪಾಲಿಕೆಯ ಆಯುಕ್ತರು ಮುಂದಾಗಬೇಕೆಂದು ಮಾಜಿ ಪಾಲಿಕೆ ಸದಸ್ಯ ಗೋಪಿ ಎಂಬುವವರು ಒತ್ತಾಯಿಸಿದ್ದಾರೆ.
ಈಗಾಗಲೇ ಪಾಲಿಕೆಯ ಅವಧಿ 10 ತಿಂಗಳು ಆಗಿದೆ. ಮುಂದಿನ ಚುನಾವಣೆಗಾಗಿ ಮಾಜಿ ಪಾಲಿಕೆ ಸದಸ್ಯರು ಎದುರು ನೋಡುತ್ತಿದ್ದಾರೆ. ಈ ನಡುವೆ ಕೆಲ ಪಾಲಿಕೆ ಮಾಜಿ ಸದಸ್ಯರು ಹಣ ದುರ್ಬಳಕೆ ಮಾಡಿಕೊಂಡಿರುವುದು, ಸದ್ಯ ಅವರಿಗೆ ಮುಳುವಾಗಿದೆ. ಇನ್ನು ಈ ಕುರಿತು ಲೋಕಾಯುಕ್ತಗೆ ದೂರು ನೀಡಲಾಗಿದ್ದು, ಲೋಕಾಯುಕ್ತರ ತನಿಖೆಯಿಂದ ಮಾಜಿ ಪಾಲಿಕೆಯ ಸದಸ್ಯರ ಏನೆಲ್ಲಾ ಗೋಲ್ ಮಾಲ್ ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Wed, 4 September 24