ಕೇಂದ್ರ ಉಕ್ಕು ಸಚಿವರಾದ ಕುಮಾರಸ್ವಾಮಿ; ಭದ್ರಾವತಿಯ ವಿಐಎಸ್​ಎಲ್​ ಕಾರ್ಖಾನೆಗೆ ಹಿಡಿದ ಗ್ರಹಣ ಬಿಡುತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 9:23 PM

ದಶಕಗಳಿಂದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಗ್ರಹಣ ಹಿಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಗ್ಗಜಗ್ಗಾಟದಲ್ಲಿ ದೇಶದ ಪ್ರತಿಷ್ಠಿತ ಕಾರ್ಖಾನೆಯು ಬಾಗಿಲು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಸದ್ಯ ಆಕ್ಸಿಜನ್​ನಲ್ಲಿರುವ ಭದ್ರಾವತಿಯ ವಿಐಎಸ್​ಎಲ್​ಗೆ ಈಗ ಕುಮಾರಸ್ವಾಮಿ ಸಚಿವರಾಗುತ್ತಿದ್ದಂತೆ ಹೊಸ ಆಶಾಕಿರಣ ಸಿಕ್ಕಂತಾಗಿದೆ. ಕುಮಾರ್ ಸ್ವಾಮಿ ಮೇಲೆ ಕಾರ್ಮಿಕರ ಚಿತ್ತ ಕುರಿತು ಒಂದು ವರದಿ ಇಲ್ಲಿದೆ.

ಕೇಂದ್ರ ಉಕ್ಕು ಸಚಿವರಾದ ಕುಮಾರಸ್ವಾಮಿ; ಭದ್ರಾವತಿಯ ವಿಐಎಸ್​ಎಲ್​ ಕಾರ್ಖಾನೆಗೆ ಹಿಡಿದ ಗ್ರಹಣ ಬಿಡುತ್ತಾ?
ಹೆಚ್​ಡಿ ಕುಮಾರಸ್ವಾಮಿ
Follow us on

ಶಿವಮೊಗ್ಗ, ಜೂ.11: ದೇಶದ ಪ್ರಸಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿ ಎಂದು ಹೋರಾಟ ಆರಂಭವಾಗಿ ಇವತ್ತಿಗೆ ಒಂದು ತಿಂಗಳು ಆಗಿದೆ. ಇನ್ನು ವಿಐಎಸ್ಎಲ್(VISL) ವಿಚಾರವಾಗಿ ರಾಜ್ಯ ಸರಕಾರ ಮತ್ತು ರಾಜಕೀಯ ಪಕ್ಷಗಳು ರಾಜಕಾರಣ ಬಿಟ್ಟು ಮತ್ತೇನು ನಡೆಯುತ್ತಿಲ್ಲ. ವಿಧಾನಸಭೆ ಚುನಾವಣೆ ಪ್ರಚಾರದ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ಭದ್ರಾವತಿಯ ವಿಐಎಸ್​ಎಲ್ ಕಾರ್ಖಾನೆ ಪರವಾಗಿ ಗುಡುಗಿದ್ದು, ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಕುಮಾರಣ್ಣ ಎನ್​ಎಡಿಎ ಮೈತ್ರಿಕೂಟದಲ್ಲಿದ್ದು, ಗೆದ್ದು  ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದಾರೆ.

ದಶಕಗಳಿಂದ ವಿಐಎಸ್​ಎಲ್​ನ ಪುನಶ್ಚೇತನಕ್ಕೆ ಸಾವಿರಾರು ಕಾರ್ಮಿಕರು ಹೋರಾಟ ಮಾಡುತ್ತಿದ್ಧಾರೆ. ಇದರಿಂದ ಈಗಾಗಲೇ ಕಳೆದ ಬಿಜೆಪಿಯ ಕೇಂದ್ರ ಸರಕಾರವು ನಷ್ಟದಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಬಾಗಿಲು ಮುಚ್ಚಲು ನಿರ್ಧಾರ ತೆಗೆದುಕೊಂಡಿತ್ತು. ಆದ್ರೆ, ಇದಕ್ಕೆ ಭದ್ರಾವತಿಯ ವಿಐಎಸ್​ಎಲ್​ನ ಕಾರ್ಮಿಕರು ಮತ್ತು ಮಲೆನಾಡಿಗರು ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಹೋರಾಟ ಮಾಡಿದ್ದರು. ಕಾರ್ಮಿಕರ ಆಕ್ರೋಶಕ್ಕೆ ಮಣಿದು ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಖಾನೆ ಮುಚ್ಚದಂತೆ ಕೇಂದ್ರ ಸರಕಾರದ ಮನವೊಲಿಸಲು ಯಶ್ವಸ್ವಿಯಾಗಿದ್ದರು. ಆದ್ರೆ, ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ಈ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಹಿಂದೇಟು ಹಾಕಿತ್ತು.

ಇದನ್ನೂ ಓದಿ:ಶಿವಮೊಗ್ಗ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ನಿರ್ಧಾರ; ಕಾರ್ಮಿಕರ ಗೋಳು ಕೇಳುವವರಾರು?

ಕಾರ್ಮಿಕರಲ್ಲಿ ಹೊಸ ಉತ್ಸಾಹ

ಇದಕ್ಕೆ 1500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ತಮ್ಮ ಆಕ್ರೋಶ ಹೊರಹಾಕಿದ್ದರು. ಕೇಂದ್ರದಲ್ಲಿ ರಾಜ್ಯದ ಮಾಜಿ ಸಿಎಂ ಎಚ್ ಡಿಕೆ ಉಕ್ಕು ಕೇಂದ್ರ ಸಚಿವರಾಗುತ್ತಿದ್ದಂತೆ ಕಾರ್ಮಿಕರಲ್ಲಿ ಹೊಸ ಉತ್ಸಾಹ ಕಂಡು ಬಂದಿದೆ. ರಾಜ್ಯದ ಪ್ರತಿಷ್ಠಿತ ಕಾರ್ಖಾನೆ  ಒಂದಾಗಿರುವ ವಿಐಎಸ್​ಎಲ್​ಗೆ ಹಿಡಿದಿರುವ ಗ್ರಹಣ ಬಿಡುವ ಹೊಸ ಭರವಸೆ ಸಿಕ್ಕಂತಾಗಿದೆ. ಪ್ರತಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಯ ಪುನಶ್ವೇತನದ್ದೇ ದೊಡ್ಡ ಸದ್ದು ಮಾಡುತ್ತದೆ. ಚುನಾವಣೆ ಬಳಿಕ ವಿಐಎಸ್​ಎಲ್ ಕಾರ್ಖಾನೆಯ ಕುರಿತು ಯಾವುದೇ ಸರಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಶತಮಾನೋತ್ಸವ ಪೂರೈಸಿರುವ ವಿಐಎಸ್​ಎಲ್ ಕಾರ್ಖಾನೆಯಲ್ಲಿರುವ ಎಲ್ಲ ಯಂತ್ರೋಪಕರಣಗಳು ಹಳೆಯದಾಗಿವೆ. ಇದರಿಂದ ಬಹುತೇಕ ಯೂನಿಟ್​ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಉಕ್ಕಿನ ಉತ್ಪಾದನೆ ಕುಸಿದು ಹೋಗಿದೆ.

ಕಾರ್ಖಾನೆಯಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದರು. ಆದ್ರೆ, ಈಗ ನೂರು ಕಾರ್ಮಿಕರು ಮಾತ್ರ ದುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಎನ್​ಡಿಎ ಸರಕಾರ ಅಧಿಕಾರಿಕ್ಕೆ ಬಂದಿದೆ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್​ನ ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದಾರೆ. ಇದರಿಂದ ಭದ್ರಾವತಿಯ ವಿಐಎಸ್​ಎಲ್​ ಕಾರ್ಮಿಕರಿಗೆ ಮರುಜನ್ಮ ಬಂದಂತಾಗಿದೆ. ದಶಕಗಳ ಕಾರ್ಮಿಕರ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನ್ಯಾಯ ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಈ ನಡುವೆ ನಾಲ್ಕನೇ ಬಾರಿ ಸಂಸದರಾಗಿರುವ ಬಿ. ವೈ ರಾಘವೇಂದ್ರ ಅವರಿಗೆ ಕಾರ್ಮಿಕ ಸಂಘಟನೆಗಳು ಭೇಟಿ ಆಗಿ ವಿಐಎಸ್ ಎಲ್ ಕಾರ್ಖಾನೆಯ ಪುನಶ್ವೇತನಕ್ಕೆ ಮನವಿ ಮಾಡಿವೆ. ಸದ್ಯ ರಾಜ್ಯದವರೇ ಆಗಿರುವ ಉಕ್ಕು ಸಚಿವ ಕುಮಾರಸ್ವಾಮಿ ಅವರಿಂದ ಕಾರ್ಮಿಕರು ದೊಡ್ಡ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ವಿಐಎಸ್​ಎಲ್ ಕಾರ್ಖಾನೆ ಮತ್ತೆ ಪುನಶ್ವೇತನಗೊಳ್ಳಬೇಕು. ಕಾರ್ಖಾನೆಯು ತೀವ್ರ ನಷ್ಟ ಅನುಭವಿಸಿದ ಹಿನ್ನಲೆಯಲ್ಲಿ ಸಾವಿರಾರು ಕಾರ್ಮಿಕರಿಗೆ ಕೆಲಸ ವಿಲ್ಲದಂತಾಗಿದೆ. ಒಂದು ಸಲ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಶುರುವಾದರೆ ಮತ್ತೆ ಭದ್ರಾವತಿಯ ಉಕ್ಕಿನ ನಗರಿಯ ಗತವೈಭವ ವಾಪಸ್ ಬರಲು ಸಾಧ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Tue, 11 June 24