ವಾಲ್ಮೀಕಿ ಕೇಸ್​: ತನಿಖೆ ಸರಿಯಾಗಿ ಮಾಡದಿದ್ರೆ ಹೈಕೋರ್ಟ್​ಗೆ ಹೋಗ್ತೇನೆ: ಮೃತ ಚಂದ್ರಶೇಖರನ್ ಪತ್ನಿ ಎಚ್ಚರಿಕೆ

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶಿವಮೊಗ್ಗ ಕೋರ್ಟ್​ಗೆ 300 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿದ ಮೃತರ ಪತ್ನಿ ಕವಿತಾ, ‘ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಾಲ್ಮೀಕಿ ಕೇಸ್​: ತನಿಖೆ ಸರಿಯಾಗಿ ಮಾಡದಿದ್ರೆ ಹೈಕೋರ್ಟ್​ಗೆ ಹೋಗ್ತೇನೆ: ಮೃತ ಚಂದ್ರಶೇಖರನ್ ಪತ್ನಿ ಎಚ್ಚರಿಕೆ
ಮೃತ ಚಂದ್ರಶೇಖರನ್ ಪತ್ನಿ ಕವಿತಾ ಎಚ್ಚರಿಕೆ
Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2024 | 2:52 PM

ಶಿವಮೊಗ್ಗ, ಆ.22:  ಕಳೆದ ಮೇ.28 ರಂದು ಶಿವಮೊಗ್ಗದ (Shivamogga) ವಿನೋಬ ನಗರದ ಕೆಂಚಪ್ಪ ಲೇಔಟ್​ನಲ್ಲಿರುವ ಮನೆಯಲ್ಲಿ ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 300 ಪುಟಗಳ ಚಾರ್ಜ್​ಶೀಟ್​ ಶಿವಮೊಗ್ಗ ಕೋರ್ಟ್​ಗೆ ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮೃತ ಚಂದ್ರಶೇಖರನ್ ಪತ್ನಿ ಕವಿತಾ ಅವರು ಮಾತನಾಡಿ, ‘ತನಿಖೆ ಸರಿಯಾಗಿ ಮಾಡದಿದ್ರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹಿಸಿದ ಪತ್ನಿ ಕವಿತಾ

ಜೊತೆಗೆ ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ನನ್ನ ಪತಿ ಚಂದ್ರಶೇಖರನ್​ ಹಣ ದುರುಪಯೋಗ ಮಾಡಿಲ್ಲ. ನನ್ನ ಪತಿ ಹಣ ತಿಂದಿದ್ದರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ನನ್ನ ಪತಿ ಹಣ ತಿಂದಿದ್ದಾರೋ ಇಲ್ಲವೋ ತನಿಖೆಯಿಂದ ಹೊರಬರಲಿ. ರಾಜ್ಯ ಸರ್ಕಾರ ನ್ಯಾಯಯುತವಾಗಿ ಪ್ರಕರಣದ ತನಿಖೆ ನಡೆಸಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; 300 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ ಅಧಿಕಾರಿಗಳು

ನಾನು ಜೀವನ ನಡೆಸಲು ಪರದಾಡ್ತಿದ್ದೇವೆ

ಸರ್ಕಾರದಿಂದ ಪರಿಹಾರ ಕೊಡ್ತೀವಿ ಅಂದಿದ್ದರು, ಈವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ. ಅವತ್ತು ಎಲ್ಲಾ ಮಾತನಾಡಿಸಿಕೊಂಡರು ಹೋದರು, ಇದುವರೆಗೆ ಯಾರು ನಮ್ಮ ಮನೆ ಕಡೆ ಬಂದಿಲ್ಲ. ನಾನು ಜೀವನ ನಡೆಸಲು ಪರದಾಡುತ್ತಿದ್ದು, ನಮ್ಮ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಕೊಟ್ಟವರು ನಾವೇ, ನಮ್ಮ ಮನೆಯವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಹೀಗಾಗಿ ನ್ಯಾಯಯುತವಾಗಿ ತನಿಖೆ ನಡೆಯಲಿ ಎಂದು ಸರಕಾರದ ವಿರುದ್ಧ ಮೃತ ಚಂದ್ರಶೇಖರ ಪತ್ನಿ ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ