AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; 300 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ ಅಧಿಕಾರಿಗಳು

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶಿವಮೊಗ್ಗ ಕೋರ್ಟ್​​ಗೆ 300 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರು ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; 300 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ ಅಧಿಕಾರಿಗಳು
ವಾಲ್ಮೀಕಿ ನಿಗಮ ಹಗರಣ
TV9 Web
| Edited By: |

Updated on:Aug 22, 2024 | 12:41 PM

Share

ಶಿವಮೊಗ್ಗ, ಆಗಸ್ಟ್​.22: ವಾಲ್ಮೀಕಿ ನಿಗಮದ ಅಧಿಕಾರಿ (Valmiki Corporation Scam) ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರು ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಸಿಐಡಿ (CID) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್​ಶೀಟ್ ಅನ್ನು ಶಿವಮೊಗ್ಗ ಕೋರ್ಟ್​​ಗೆ ಸಲ್ಲಿಸಿದ್ದಾರೆ.

ಘಟನೆ ಸಂಬಂಧ ಶಿವಮೊಗ್ಗ ವಿನೋಭಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಚಂದ್ರಶೇಖರ್ ಪತ್ನಿ ನೀಡಿದ್ದ ದೂರು ಆಧರಿಸಿ ಸಿಐಡಿ ತನಿಖೆ ನಡೆಸಿತ್ತು. ಡೆತ್​​ನೋಟ್ ಆಧರಿಸಿ ತನಿಖೆ ಮಾಡಿರುವ ಸಿಐಡಿ ಅಧಿಕಾರಿಗಳ ಟೀಂ ಇದೀಗ ಕೇವಲ ಪದ್ಮನಾಭ, ಪರುಶುರಾಮ್ ಆರೋಪಿಗಳಾಗಿ ಮಾಡಿ ಚಾರ್ಜ್​​ಶೀಟ್ ಸಲ್ಲಿಸಿದೆ. ಈ ಹಿಂದೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಪ್ರಾಥಮಿಕ ಆರೋಪ ಪಟ್ಟಿಯಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್‌ ಅವರ ಹೆಸರು ಉಲ್ಲೇಖಿಸಿರಲಿಲ್ಲ.

ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಅವರು ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್.ಪಿ ಬರೆದಿರುವ ಡೆತ್‌ ನೋಟ್‌ನಲ್ಲೂ ಹೆಸರು ಹೇಳದೆ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಉಲ್ಲೇಖ ಮಾಡಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಐಷಾರಾಮಿ ಫ್ಲ್ಯಾಟ್‌ ಖರೀದಿ, 10 ಕೆಜಿ ಚಿನ್ನದ ಬಿಸ್ಕೆಟ್​ ಜಪ್ತಿ ಮಾಡಿದ ಎಸ್​ಐಟಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಹಣದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.

ಫೆ.26ರಂದು ಬ್ಯಾಂಕ್‌ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ-ಹಂತವಾಗಿ 187.33 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:16 pm, Thu, 22 August 24