ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಸಾವು

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ಮದುವೆಯಾದ ಮರುದಿನವೇ ಯುವಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ನವೆಂಬರ್ 30ರಂದು ಮದುವೆಯಾಗಿ, ಡಿಸೆಂಬರ್ 1ರಂದು ವಧುವಿನ ಮನೆಗೆ ತೆರಳಿದಾಗ, ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದು, ವಧುವಿನ ಆಕ್ರಂದನ ಮುಗಿಲು ಮುಟ್ಟಿದೆ.

ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಸಾವು
ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಸಾವು
Updated By: ಭಾವನಾ ಹೆಗಡೆ

Updated on: Dec 03, 2025 | 10:34 AM

ಶಿವಮೊಗ್ಗ, ಡಿಸೆಂಬರ್ 03: ಶಿವಮೊಗ್ಗ ಮೂಲದ ಯುವಕ ಮದುವೆಯಾದ ಮರುದಿನವೇ ಸಾವನ್ನಪ್ಪಿರುವ ಮನಕಲಕುವ ಘಟನೆ  (Groom Death) ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದ್ದು, ಸಂಭ್ರಮದ ಮನೆಯಲ್ಲಿ ಸೂತಕ ಆವರಿಸಿದೆ.  ಮದುವೆಯ ಬಳಿಕ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ವರ ಕೊನೆಯುಸಿರೆಳೆದಿದ್ದಾನೆ.

ಭಾನುವಾರ ಅದ್ಧೂರಿಯಾಗಿ ಜರುಗಿದ್ದ ಮದುವೆ

ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ರಮೇಶ್ ತನ್ನ ತಂದೆ ತಾಯಿ ನಿಧನದ ನಂತರ ಹೊಸಕೊಪ್ಪದಲ್ಲಿ ತಾಯಿ ಮನೆಯಲ್ಲೇ ವಾಸವಿದ್ದರು. ಒಂದು ವರ್ಷದಿಂದ ಬಂಡ್ರಿ ಗ್ರಾಮದ ಯುವತಿ ಮಧುವಿನೊಂದಿಗೆ ರಮೇಶ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೆಂಬರ್ 30ರಂದು ಶಿವಮೊಗ್ಗದ ಬಿ. ಹೆಚ್. ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಅವರ ಮದುವೆ ನೆರವೇರಿತ್ತು. ಮದುವೆಯ ನಂತರ ಡಿ.1 ರಂದು ವಧುವಿನ ಮನೆಗೆ ತೆರಳಲು ದಂಪತಿಗಳು ಹರಪ್ಪನಹಳ್ಳಿಯ ಬಂಡ್ರಿಗೆ ಆಗಮಿಸಿದ್ದರು. ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಬರಮಾಡಿಕೊಳ್ಳಲಾಗಿತ್ತು.

ದೇವರ ಮುಂದೆಯೇ ಕುಸಿದು ಬಿದ್ದ ವರ

ವಧುವಿನ ಮನೆ ತಲುಪಿದ ಬಳಿಕ, ದಂಪತಿಗಳು ದೇವರ ಮನೆಯ ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೈಮುಗಿಯಲು ಬಾಗಿಲಿನತ್ತ ಸಾಗುತ್ತಿದ್ದ ರಮೇಶ್ ಹೃದಯಾಘಾತದಿಂದ ಹಠಾತ್ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ರಮೇಶ್ ಅವರ ಅಂತ್ಯಕ್ರಿಯೆಯನ್ನು ಶಿವಮೊಗ್ಗದ ಹೊಸಕೊಪ್ಪ ಗ್ರಾಮದಲ್ಲಿ ನೆರವೇರಿಸಲಾಗಿದ್ದು, ಮದುವೆಯ ಮರುದಿನವೇ ಗಂಡನನ್ನು ಕಳೆದುಕೊಂಡ ವಧುವಿನ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.