ಶಿವಮೊಗ್ಗ: ಚಿರತೆ ದಾಳಿಗೆ ಮಹಿಳೆ ಬಲಿ; ಅರಣ್ಯಾಧಿಕಾರಿಗಳ ವಿರುದ್ದ ಕುಟುಂಬಸ್ಥರ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2023 | 10:59 PM

Shivamogga News: ಶಿವಮೊಗ್ಗ ಮಲೆನಾಡಿನ ಅರಣ್ಯದಲ್ಲಿರುವ ಕಾಡು ಪ್ರಾಣಿಗಳ ಆಹಾರ ಅರಸಿಕೊಂಡು ನಾಡಿಗೆ ಎಂಟ್ರಿಕೊಡುತ್ತಿರುತ್ತವೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚು. ಆದ್ರೆ, ಇತ್ತೀಚಿನ ಕೆಲವು ವರ್ಷಗಳಿಂದ ಚಿರತೆಗಳ ಹಾವಳಿ ಜೋರಾಗಿದ್ದು, ಹೊಲಕ್ಕೆ ಹೋದ ಮಹಿಳೆ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ. ಸದ್ಯ ನರಬಲಿ ಪಡೆದ ಚಿರತೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಶಿವಮೊಗ್ಗ: ಚಿರತೆ ದಾಳಿಗೆ ಮಹಿಳೆ ಬಲಿ; ಅರಣ್ಯಾಧಿಕಾರಿಗಳ ವಿರುದ್ದ ಕುಟುಂಬಸ್ಥರ ಆಕ್ರೋಶ
ಮೃತ ಮಹಿಳೆ
Follow us on

ಶಿವಮೊಗ್ಗ, ಆ.10: ತಾಲೂಕಿನ ಬಿಕ್ಕೋನ ಹಳ್ಳಿಯ ಯಶೋದಮ್ಮ ಎಂಬ 45 ವರ್ಷದ ಮಹಿಳೆ ಹೊಲದಲ್ಲಿ ಕಳೆ ತೆಗೆಯುವಾಗ ಚಿರತೆ(Leopard)ಯೊಂದು ದಾಳಿ ನಡೆಸಿದೆ. ಪರಿಣಾಮ ಚಿರತೆಯ ದಾಳಿಗೆ ಯಶೋದಮ್ಮ ಬಲಿಯಾಗಿದ್ದಾರೆ. ಮೊದಲ ಬಾರಿಗೆ ತಾಲೂಕಿನಲ್ಲಿ ಚಿರತೆಯ ದಾಳಿಗೆ  ಬಲಿಯಾಗಿದೆ. ಶಿವಮೊಗ್ಗದ ಬಿಕ್ಕೋನ ಹಳ್ಳಿ ಸರ್ವೆ ನಂಬರ್ 9 ರಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಕುತ್ತಿಗೆ ಭಾಗವೂ ಗಾಯಗೊಂಡಿದ್ದು, ಹಿಂಭಾಗದಲ್ಲಿ ತೀವ್ರ ತರವಾದ ದಾಳಿಗೆ ಒಳಗಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಮತ್ತು ಶಂಕರವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಭಯದಲ್ಲಿ ಸುತ್ತಮುತ್ತ ಗ್ರಾಮಸ್ಥರು

ಈ ದಾಳಿ ಬಿಕ್ಕೋನಹಳ್ಳಿ ಸುತ್ತಮುತ್ತ ಗ್ರಾಮಸ್ಥರನ್ನು ಗಾಬರಿ ಪಡಿಸಿದೆ. ಈ ಭಾಗದಲ್ಲಿ ಚಿರತೆ ಹೆಚ್ಚಿದ್ದು, ಅರಣ್ಯ ಇಲಾಖೆ‌ಯವರ ನಿರ್ಲಕ್ಷ್ಯದಿಂದ ಯಾವ ಕ್ರಮವೂ ಜರುಗಿಸಿಲ್ಲ. ಇದೀಗ ಚಿರತೆ ದಾಳಿಯ ಬಳಿಕ ಗ್ರಾಮಸ್ಥರು ಮನೆಯಿಂದ ಹೊರಗೆ ಮತ್ತು ಗದ್ದೆ, ಹೊಲ, ತೋಟಗಳಿಗೆ ಹೋಗಲು ಭಯಪಡುವಂತಾಗಿದೆ. ಮಹಿಳೆಯ ಸಾವಿನಿಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಸಾವಿನ ಬಳಿಕ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು

ಚಿರತೆಯು ಮಹಿಳೆಯನ್ನು ಬಲಿ ಪಡೆದ ಬಳಿಕ ಶಂಕರ ವಲಯ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನರ ಬಲಿಯಾದ ಮೇಲೆ ಎಚ್ಚೆತ್ತುಕೊಂಡಿರುವುದಕ್ಕೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಭಾಗದಲ್ಲಿ ಅನೇಕ ದಿನಗಳಿಂದ ಚಿರತೆಗಳ ಕಾಟವಿದೆ. ಅರಣ್ಯಾಧಿಕಾರಿಗಳು ಕಾಟಾಚರಕ್ಕೆ ಬಂದು ಒಂದು ಬೋನ್ ಇಟ್ಟು ಹೋಗಿದ್ದು ಬಿಟ್ಟರೆ ಚಿರತೆ ಸೆರೆಗೆ ಯಾವುದೆ ಕಾರ್ಯಾಚರಣೆ ಮಾಡಿಲ್ಲ. ಈ ಮೊದಲೇ ಎಚ್ಚೆತ್ತುಕೊಂಡಿದ್ದರೆ ಮಹಿಳೆಯ ಜೀವ ಬಚಾವ್ ಆಗುತ್ತಿತ್ತು ಎಂದಿದ್ದಾರೆ.

ಇದನ್ನೂ ಓದಿ:ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್

ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಂದ ಹರಸಾಹಸ

ಕಲ್ಲುಗಂಗೂರು ಮತ್ತು ಬಿಕ್ಕೋನಹಳ್ಳಿಯ ಗುಡ್ಡಗಳಲ್ಲಿ ಮೂರು ಬೋನುಗಳನ್ನ ಇಡಲಾಗಿದೆ. 10 ಕ್ಯಾಮೆರಾಗಳನ್ನ ಅಳವಡಿಸಲಾಗುತ್ತದೆ. ಸಂಜೆ ಪರಾಂಬುಲೆನ್ಸ್ ತಂಡ ರಚಿಸಲಾಗಿದೆ ನಾಲ್ಕರಿಂದ 6 ಜನರನ್ನ ಒಳಗೊಂಡಿದೆ. ಜೊತೆಗೆ ಡಿಆರ್​ಎಫ್​ಒ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಚಿರತೆಯ ಚಲನವಲನಗಳ ಮಾಹಿತಿಯನ್ನು ಮತ್ತು ಗ್ರಾಮಸ್ಥರು ಎಲ್ಲಿ ಕಂಡಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ನರಬಲಿ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಟೀಂ ಕಾರ್ಯಾಚರಣೆ ಆರಂಭಿಸಿದೆ. ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವುದಾಗಿ ಶಿವಮೊಗ್ಗ ತಹಸೀಲ್ದಾರ್ ನಾಗರಾಜ್ ಟಿವಿ9 ಮೂಲಕ ತಿಳಿಸಿದ್ದಾರೆ.

ಮುಂಗಾರು ಕೃಷಿ ಆರಂಭವಾಗಿದೆ. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ಹೊಲಕ್ಕೆ ಹೋಗಿದ್ದ ಮಹಿಳೆಯನ್ನು ಚಿರತೆಯು ಬಲಿ ಪಡೆದಿದ್ದರಿಂದ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ನರಬಲಿ ಪಡೆದ ಚಿರತೆ ಸೆರೆಯಾಗುವವರೆಗೂ ಗ್ರಾಮಸ್ಥರಿಗೆ ಅಪಾಯ ಮಾತ್ರ ತಪ್ಪಿದಲ್ಲ. ಅರಣ್ಯಾಧಿಕಾರಿಗಳು ನರಬಲಿ ಪಡೆದ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:47 pm, Thu, 10 August 23