ಶಿವರಾಮೇಗೌಡ ಕ್ಷಮೆಯಾಚಿಸಿದರೂ ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳುವ ಪ್ರಶ್ನೆ ಉದ್ಭವಿಸದು ಎಂದರು ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2022 | 5:24 PM

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದೆಹಲಿಗೆ ಹೋಗಿ ಮಂತ್ರಿಗಳನ್ನ ಭೇಟಿ‌ ಮಾಡಿ ಮನವಿ ಪತ್ರ ಸಲ್ಲಿಸದೆ ಬೆಂಗಳೂರಿನಲ್ಲಿ‌ ಇರುವ ಪ್ರಾದೇಶಿಕ ಕಚೇರಿಗೆ ಅರ್ಜಿ ಕೊಟ್ಟಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾಡುವ ಕೆಲಸವೇ ಇದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಶಿವರಾಮೇಗೌಡ ಕ್ಷಮೆಯಾಚಿಸಿದರೂ ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳುವ ಪ್ರಶ್ನೆ ಉದ್ಭವಿಸದು ಎಂದರು ಹೆಚ್ ಡಿ ಕುಮಾರಸ್ವಾಮಿ
ಹೆಚ್‌ಡಿ ಕುಮಾರಸ್ವಾಮಿ
Follow us on

ರಾಮನಗರ: ಜೆಡಿ(ಎಸ್) ಕೇಂದ್ರೀಯ ನಾಯಕತ್ವ ಮತ್ತು ಮಂಡ್ಯ ಭಾಗದ ಅತ್ಯಂತ ಪ್ರಭಾವಿ ನಾಯಕರೆನಿಸಿಕೊಂಡಿದ್ದ ದಿವಂಗತ ಜಿ ಮಾದೇಗೌಡರ (G Made Gowda) ಬಗ್ಗೆ ಹಗುರವಾಗಿ ಮಾತಾಡಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಎಲ್ ಅರ್ ಶಿವರಾಮೇಗೌಡ (LR Shivarame Gowda) ಅವರನ್ನು ಪುನ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮಂಗಳವಾರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿಯವರು ಒಂದು ಪಕ್ಷ ಶಿವರಾಮೇಗೌಡ ಕ್ಷಮೆ ಯಾಚಿಸಿದರೆ ಅವರನ್ನು ಕ್ಷಮಿಸುವ ಬಗ್ಗೆ ಪರಿಗಣಿಸಬಹುದು ಅಂತ ಹೇಳಿದ್ದು ನಿಜವಾದರೂ, ಅವರು ಕ್ಷಮೆ ಯಾಚಿಸಿದಾಗ್ಯೂ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮೇಯ ಉದ್ಭವಿಸದು ಎಂದು ಹೇಳಿದರು. ಉಚ್ಚಾಟನೆಗೊಳಗಾದ ನಂತರ ಶಿವರಾಮೇಗೌಡರು ತನ್ನೊಂದಿಗೆ ಮಾತಾಡಿಲ್ಲ ಮತ್ತು ತಾನು ಅವರ ಬಗ್ಗೆ ಮೃದುಧೋರಣೆ ತೋರುವುದು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಂತರ ಡಿಕೆ ಸಹೋದರರ ವಿರುದ್ಧ ತಮ್ಮ ವಾಗ್ದಾಳಿಯನ್ನು ಶುರುಮಾಡಿದ ಮಾಜಿ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಬದುಕು ಮತ್ತು ಅವರ ರಾಜಕೀಯ ಬದುಕಿನ ನಡುವೆ ಬಹಳ ವ್ಯತ್ಯಾಸವಿದೆ ಎಂದರು. ಹಿಂದೆ ತಾನು ರಾಮನಗರವನ್ನು ಜಿಲ್ಲೆ ಮಾಡಿದಾಗ ಅದರ ಅವಶ್ಯಕತೆ ಇಲ್ಲ ಅಂತ ಶಿವಕುಮಾರ ಹೇಳಿದ್ದರು. ಈಗ್ಯಾಕೆ ಅವರಿಗೆ ರಾಮನಗರದ ಮೇಲೆ ಇಷ್ಟೊಂದು ವ್ಯಾಮೋಹ? ತಾನು ಇದನ್ನು ಜಿಲ್ಲಾ ಕೇಂದ್ರವಾಗಿ ಮಾಡಲು ಹೋರಾಡುತ್ತಿದ್ದಾಗ ಶಿವಕುಮಾರ ಮತ್ತು ಅವರ ಸಹೋದರ ಡಿಕೆ ಸುರೇಶ್ ಎಲ್ಲಿದ್ದರು? ಕಂಡವರ ಜಮೀನಿಗೆ ಬೇಲಿ ಹಾಕಿ ಅದು ನನ್ನದು ಅನ್ನೋದೇ ರಾಜಕೀಯವಾದರೆ ಅಂಥ ರಾಜಕೀಯದಿಂದ ತಾನು ಬಹಳ ದೂರ ಇರುವುದಾಗಿ ಹೇಳಿದ ಹೆಚ್ ಡಿ ಕೆ ಅವರು ಡಿಕೆ ಸಹೋದರರಿಂದ ಬದುಕು ಕಲಿಯುವ ಅವಶ್ಯಕತೆ ತನಗಿಲ್ಲ ಎಂದರು.

ಮೇಕೆದಾಟು‌ ವಿಚಾರವಾಗಿಯೂ ಮಾತಾಡಿದ ಕುಮಾರಸ್ವಾಮಿಯವರು, ಕಾಂಗ್ರೆಸ್ ಪಕ್ಷದವರು ನಡೆಸಬೇಕೆಂದಿರುವ ಎರಡನೇ ಹಂತದ ಪಾದಯಾತ್ರೆಯ ಬಗ್ಗೆ ತಾನು ವಿರೋಧ ವ್ಯಕ್ತಪಡಿಸಿಲ್ಲ ಎಂದರು. ಅದರೆ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಮೇಕೆದಾಟು ಜಲಾಶಯ ಕಟ್ಟುವುದು ಸಾಧ್ಯವಿಲ್ಲ, ಅದು ಅವರ ನಾಯಕರಿಗೂ ಚೆನ್ನಾಗಿ ಗೊತ್ತಿದೆ. ಪಾದಯಾತ್ರೆಯ ಹಿಂದಿನ ಮೂಲ ಉದ್ದೇಶ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಾಗಿದೆ ಎಂದರು.

ಅವರು ಎರಡನೇ ಸುತ್ತಿನ ಪಾದಯಾತ್ರೆ ಮುಗಿಸಿಕೊಂಡು ಬೆಂಗಳೂರಿಗೆ ಬರಲಿ, ಅದಕ್ಕೆ ತಮ್ಮ ತಕರಾರು ಏನೂ ಇಲ್ಲ. ಆದರೆ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಕಾನೂನು ರೀತ್ಯಾ ಹೋರಾಟ ಮಾಡಬೇಕಾಗುತ್ತದೆ, ಅದರೆ ಕಾಂಗ್ರೆಸ್ ಪಕ್ಷದ ನಾಯಕರು ತಮಗೆ ಅನುಕೂಲವಾಗುವ ಹಾಗೆ ಹೋರಾಟ ಮಾಡುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಪಕ್ಷವೇ 5 ವರ್ಷಗಳ ಕಾಲ ಅಧಿಕಾರ ನಡೆಸಿತ್ತಲ್ಲ? ಅಗ ಅವರಿಗೆ ಮೇಕೆದಾಟು ಯೋಜನೆ ನೆನೆಪಿಹೆ ಬರಲಿಲ್ಲವೇ? ಆಗ ವೃಥಾ ಸಮಯ ಹಾಳು ಮಾಡಿ ಈಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಛೇಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದೆಹಲಿಗೆ ಹೋಗಿ ಮಂತ್ರಿಗಳನ್ನ ಭೇಟಿ‌ ಮಾಡಿ ಮನವಿ ಪತ್ರ ಸಲ್ಲಿಸದೆ ಬೆಂಗಳೂರಿನಲ್ಲಿ‌ ಇರುವ ಪ್ರಾದೇಶಿಕ ಕಚೇರಿಗೆ ಅರ್ಜಿ ಕೊಟ್ಟಿದ್ದಾರೆ. ಒಬ್ಬ ಮುಖ್ಯಮಂತ್ರಿ ಮಾಡುವ ಕೆಲಸವೇ ಇದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅದರೆ ತಾನು ಮುಖ್ಯಮಂತ್ರಿಯಾಗಿದ್ದಾಗ, ದೆಹಲಿಗೆ ಹೋಗಿ ಕೆಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದಾಗ ಅವರು ಡಿ ಪಿ ಅರ್ ತಯಾರಿಸಿ ನೀಡಲು ಹೇಳಿದ್ದರು. ತಾನು ಮುಖ್ಯಮಂತ್ರಿಯಾಗಿದ್ದಾಗ ತಯಾರಿಸಿದ ಡಿಪಿಆರ್ ಈಗಲೂ ಜೀವದಿಂದ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ:   ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಕೆಲಸ ಮಾಡ್ತಿದೆ ಕೇಂದ್ರ ಸರಕಾರ: ಹೆಚ್​ಡಿ ಕುಮಾರಸ್ವಾಮಿ ಕಿಡಿ