ಬೆಂಗಳೂರು: ಕೊರೊನಾ ಎರಡನೇ ಅಲೆಯ ಜತೆಗೆ ವೈದ್ಯಕೀಯ ಲೋಕವನ್ನು ಚಿಂತೆಗೆ ದೂಡಿರುವ ಬ್ಲ್ಯಾಕ್ ಫಂಗಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಲಸಿಕೆ ಅಭಾವ ಸೃಷ್ಟಿಯಾದಂತೆಯೇ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬೇಕಾದ ಆಂಫೊಟೆರಿಸಿನ್ ಬಿ ಔಷಧದಲ್ಲೂ ಕೊರತೆ ಕಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ರವಾನಿಸಿರುವ ವೈದ್ಯರು ತಕ್ಷಣವೇ ಔಷಧ ಪೂರೈಕೆ ಆಗದಿದ್ದರೆ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ,
ಬ್ಲ್ಯಾಕ್ ಫಂಗಸ್ ಭೀಕರತೆಯ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡುವುದಕ್ಕೆ ಔಷಧದ ಕೊರತೆ ಇದೆ. ಔಷಧ ಸಿಗದೇ ಇರುವುದರಿಂದ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಅದೇ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವಂತೆ ವೈದ್ಯರು ಸೂಚನೆ ನೀಡುವಂತಾಗಿದೆ ಎಂದಿದ್ದಾರೆ. ಇದು ಹೀಗೇ ಮುಂದುವರೆದಲ್ಲಿ ಚಿಕಿತ್ಸೆ ಸಿಗದೇ ಹೆಚ್ಚು ಸಾವುಗಳಾಗುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಆಂಫೊಟೆರಿಸಿನ್ ಬಿ ಔಷಧ ಪೂರೈಕೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ಮನವಿ ಮಾಡಿವೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವೆಚ್ಚ ದುಬಾರಿ ಇದೆ. ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಲಕ್ಷ ಲಕ್ಷ ಖರ್ಚಾಗುತ್ತದೆ. ಆದರೆ, ದುಬಾರಿ ಇದ್ದರೂ ಚಿಕಿತ್ಸೆ ಪಡೆಯೋಣ ಅಂದರೆ ಔಷಧವಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಆಂಫೊಟೆರಿಸಿನ್ ಬಿ ಇಂಜೆಕ್ಷನ್ ನೀಡಬೇಕು. ದೇಹದ ತೂಕವನ್ನು ಆಧರಿಸಿ ಇಂಜೆಕ್ಷನ್ ನೀಡಬೇಕಾಗಿದೆ. ಈಗ ದಿನಕ್ಕೆ ಕನಿಷ್ಠ 9 ಸಾವಿರ ಡೋಸ್ ಅಗತ್ಯವಿದೆ. ದುರದೃಷ್ಟವಶಾತ್ ರಾಜ್ಯಕ್ಕೆ ಬೇಕಾದಷ್ಟು ಔಷಧ ಪೂರೈಕೆಯಾಗುತ್ತಿಲ್ಲ. ಹೀಗಾದರೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಭೀಕರತೆ ಇನ್ನೂ ಹೆಚ್ಚಾಗುತ್ತದೆ. ಸಾವು ನೋವು ಹೆಚ್ಚಾಗುತ್ತದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಔಷಧವಿಲ್ಲದ ಹಿನ್ನೆಲೆ ಚಿಕಿತ್ಸೆ ನೀಡದೆ ವೈದ್ಯರು ಸುಮ್ಮನಿರುವಂತಾಗಿರುವುದು ದುರಂತ. ಸದ್ಯ 1500 ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ. ಒಬ್ಬರಿಗೆ ದಿನಕ್ಕೆ ಕನಿಷ್ಠ 6 ವಯಲ್ ಬೇಕಾಗುತ್ತದೆ. ಒಂದು ದಿನಕ್ಕೆ ಎಲ್ಲಾ ರೋಗಿಗಳಿಗೂ ಅಂದಾಜು 9 ಸಾವಿರ ಡೋಸ್ ಬೇಕಾಗುತ್ತದೆ. ಒಂದು ಡೋಸ್ಗೆ 6 ರಿಂದ 8 ಸಾವಿರ ರೂಪಾಯಿ ಇದೆ. ಒಬ್ಬ ರೋಗಿಗೆ 60 ವಯಲ್ಸ್ ಅವಶ್ಯಕತೆ ಇದೆ. ದೇಹದ ತೂಕದ ಆಧಾರದ ಮೇಲೆ ವಯಲ್ಸ್ ನಿರ್ಧಾರ ಆಗುತ್ತೆ. 60 ಡೋಸ್ಗೆ ಬರೋಬ್ಬರಿ 4 ಲಕ್ಷ ರೂಪಾಯಿವರೆಗೆ ವೆಚ್ಚ ಆಗಲಿದೆ. ಮಾತ್ರೆ, ಬೆಡ್ ಚಾರ್ಜ್ ಇತ್ಯಾದಿ ಸೇರಿದರೆ ಒಂದರಿಂದ ಎರಡು ಲಕ್ಷ ರೂಪಾಯಿ ಆಗುತ್ತೆದೆ. ಹೀಗಾಗಿ ಬಡ, ಮಧ್ಯಮ ಹಾಗೂ ಸಾಮಾನ್ಯ ಜನರಿಗೆ ಚಿಕಿತ್ಸೆ ಕಷ್ಟ ಆಗುತ್ತದೆ. ಆದ್ದರಿಂದಲೇ ಬಹುತೇಕ ಬಡವರಿಗೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚನೆ ನೀಡುತ್ತಿದ್ದಾರೆ. ಅಲ್ಲದೇ ಚಿಕಿತ್ಸೆ ಕೊಡೋಣ ಅಂದರೂ ಔಷಧವಿಲ್ಲ ಎಂದು ಖಾಸಗಿ ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಎಂಫೊಟೆರಿಸಿನ್-ಬಿ ಇಂಜೆಕ್ಷನ್ ಪೂರೈಕೆ; ಇಂದು ರಾಜ್ಯ ತಲುಪಿದ್ದು 5190 ಚುಚ್ಚುಮದ್ದುಗಳು
ಬ್ಲ್ಯಾಕ್ ಫಂಗಸ್ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು