ಡಿಕೆ ಶಿವಕುಮಾರ್ ಪ್ರಕರಣ ಸಿಬಿಐಗೆ ನೀಡಿರುವುದು ಯಾಕೆ ಕಾನೂನು ಬಾಹಿರ? ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐಗೆ ನೀಡಿರುವುದು ಕಾನೂನುಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಸಿಬಿಐ ಪತ್ರ ಬರೆದಿದಕ್ಕೆ ತಮ್ಮ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಸದ್ಯ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, ನ.24: ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಪ್ರಕರಣವನ್ನು ಸಿಬಿಐಗೆ ನೀಡಿರುವುದು ಕಾನೂನುಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಸದ್ಯ, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಶಿವಕುಮಾರ್ ಸಿಟ್ಟಿಂಗ್ ಎಂಎಲ್ಎ ಆಗಿದ್ದು, ತನಿಖೆಗೆ ಒಪ್ಪಿಸುವ ಮುನ್ನ ಸ್ಪೀಕರ್ ಅನುಮತಿ ಪಡೆಯಬೇಕು. ಆದರೆ, ಅಂದಿನ ಸರ್ಕಾರ ಅನುಮತಿ ಪಡೆಯಲಿಲ್ಲ. ಹೀಗಾಗಿ ಅದು ಕಾನೂನುಬಾಹಿರ ಎಂದು ಹೇಳಿದರು.
ಸಿಬಿಐ ಪತ್ರ ಬರೆದಿದಕ್ಕೆ ತಮ್ಮ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪನವರು ಕಾನೂನು ಪ್ರಕಾರ ಮಾಡಬೇಕು ಅಲ್ವಾ? ತನಿಖೆ ಮಾಡಬೇಕೋ ಬೇಡವೇ ಎಂಬುದರ ಬಗ್ಗೆ ಅಡ್ವೊಕೇಟ್ ಜನರಲ್ (ಎಜಿ) ಅವರ ಕಾನೂನಾತ್ಮಕ ಅಭಿಪ್ರಾಯವನ್ನು ಕೇಳುತ್ತಾರೆ. ಆದರೆ ಅಂದು ಎಜಿ ಅವರು ಅಭಿಪ್ರಾಯ ಕೊಡುವ ಮುನ್ನವೇ ಮೌಖಿಕ ಆದೇಶ ಕೊಟ್ಟಿದ್ದರು ಎಂದರು.
ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಯಾಕೆ ಮೌಖಿಕವಾಗಿ ರೆಫರ್ ಮಾಡಿದರು ಎಂದು ಕೇಳಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಿಟ್ಟಿಂಗ್ ಎಂಎಲ್ಎ, ತನಿಖೆಗೆ ಅನುಮತಿ ಕೊಡುವವರು ಸ್ಪೀಕರ್. ಆದರೆ ಇವರು ಅನುಮತಿ ತಗೊಂಡಿಲ್ಲ, ಅದಕ್ಕೆ ಕಾನೂನುಬಾಹಿರ ಅಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ನಾವು ಕೇಸ್ ಹಿಂಪಡೆದಿಲ್ಲ, ಕಾನೂನಿನ ಪ್ರಕಾರ ಮಂಜೂರು ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಸಿಬಿಐ ತನಿಖೆಯಿಂದ ಪಾರಾಗಲು ಡಿಕೆ ಶಿವಕುಮಾರ್ಗಿದೆ ಸವಾಲು, ಸಿಬಿಐ ಮುಂದಿನ ದಾರಿ ಏನು?
ಡಿ.ಕೆ.ಶಿವಕುಮಾರ್ ವಿರುದ್ಧದ CBI ತನಿಖೆಗೆ ನೀಡಿದ ಅನುಮತಿ ವಾಪಸ್ ಪಡೆಯಲು ಸಂಪುಟ ಅನುಮೋದನೆ ನೀಡಿದ್ದನ್ನು ಖಂಡಿಸಿ ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಜೆಪಿಯವರು ಕಾನೂನು ಹೋರಾಟ ಮಾಡಲಿ. ಸಿಬಿಐಗೆ ಕೊಟ್ಟಿರುವುದು ಸರಿಯಲ್ಲ ಅಂತಾ ಸರ್ಕಾರ ನಿರ್ಧಾರ ಮಾಡಿದೆ ಎಂದರು.
ಸಿಬಿಐ ತನಿಖೆ ವಾಪಸ್ ಪಡೆಯುವ ವಿಚಾರದಲ್ಲಿ ಮುಖ್ಯಮಂತ್ರಿ ಪಾತ್ರ ಇದೆ ಎಂಬ ಯಡಿಯೂರಪ್ಪ ಆರೋಪ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಮಗೂ ಅದಕ್ಕೂ ಸಂಬಂಧವಿಲ್ಲ, ಕ್ಯಾಬಿನೆಟ್ ನಿರ್ಧಾರ ಮಾಡಿದೆ. ನಾವು ಸಂಪುಟ ಮತ್ತು ಅಡ್ವೊಕೇಟ್ ಜನರಲ್ ಅವರರ ಅಭಿಪ್ರಾಯ ಪಡೆದಿದ್ದೇವೆ. ಅಂದಿನ ಮುಖ್ಯಮಂತ್ರಿ ಮೌಖಿಕ ಆದೇಶ ಕೊಟ್ಟಿದ್ದರು. ಲಿಖಿತ ಆದೇಶ ಕೊಟ್ಟಿರಲಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ