Siddaramaiah: ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಇದು
Prajadhwani Samavesha: "ಆ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ. ನರೇಂದ್ರ ಮೋದಿ ಸುಳ್ಳು ಹೇಳಿರುವುದನ್ನು, ಮೋಸ ಮಾಡಿರುವುದನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಿರಬಹುದು. ಅದಕ್ಕಾಗಿಯೇ ಅದರ ಪ್ರದರ್ಶನಕ್ಕೆ ತಡೆಹಿಡಿದಿರಬಹುದು" ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಚಾಮರಾಜನಗರ: 2022ರ ಗುಜರಾತ್ ಗಲಭೆ ಘಟನೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ನೇರ ಪಾತ್ರ ಇದೆ ಎಂಬಂತೆ ಬಿಂಬಿಸಿ ಬಿಬಿಸಿ ಸಾಕ್ಷ್ಯಚಿತ್ರ (BBC Documentary) ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಆ ಸಾಕ್ಷ್ಯ ಚಿತ್ರದಲ್ಲಿ ಮೋದಿ ಮೋಸ ಮಾಡಿರುವುದನ್ನು ತೋರಿಸಿರಬಹುದು ಎಂದು ಕುಟುಕಿದ್ದಾರೆ.
“ಆ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ. ನರೇಂದ್ರ ಮೋದಿ ಸುಳ್ಳು ಹೇಳಿರುವುದನ್ನು, ಮೋಸ ಮಾಡಿರುವುದನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಿರಬಹುದು. ಅದಕ್ಕಾಗಿಯೇ ಅದರ ಪ್ರದರ್ಶನಕ್ಕೆ ತಡೆಹಿಡಿದಿರಬಹುದು” ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್ ರಾಜ್ಯಾದ್ಯಂತ ಸಂಭವಿಸಿದ್ದ ಭೀಕರ ಗಲಭೆ ಘಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ನಡೆದ ಗಲಭೆ ಘಟನೆಗಳಿಗೆ ಅಂದಿನ ರಾಜ್ಯ ಸರ್ಕಾರ ಕುಮ್ಮಕ್ಕು ಕೊಟ್ಟಿತ್ತು ಎಂಬ ಆರೋಪ ಇದೆ. ಇದೇ ಆಧಾರದಲ್ಲಿ ಬಿಬಿಸಿ ಸಾಕ್ಷ್ಯ ಚಿತ್ರ ತಯಾರಿಸಿ ಬಿಡುಗಡೆ ಮಾಡಿದೆ. ಈ ಡಾಕ್ಯುಮೆಂಟರಿಯ ಪ್ರಸಾರವನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಅಕ್ರಮವಾಗಿ ಈ ಸಾಕ್ಷ್ಯ ಚಿತ್ರ ಪ್ರಸಾರ ಮಾಡಿದವರನ್ನು ಬಂಧಿಸಲಾಗುತ್ತಿದೆ.
ಕರ್ನಾಟಕದಲ್ಲಿ ಕೈ ಮತ್ತೆ ಅಧಿಕಾರ: ಸಿದ್ದರಾಮಯ್ಯ ವಿಶ್ವಾಸ
ಬಿಬಿಸಿ ಸಾಕ್ಷ್ಯಚಿತ್ರದ ವಿಚಾರದಲ್ಲಿ ಮೋದಿ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಹಿಡಿಯುತ್ತದೆ ಎಂದು ವಿಶ್ವಾಸ ಕೂಡ ವ್ಯಕ್ತಪಡಿಸಿದರು.
ಇಲ್ಲಿ ಕಾಂಗ್ರೆಸ್ನಿಂದ ಪ್ರಜಾಧ್ವನಿ ಸಮಾವೇಶ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಆಗಮಿಸಿದ ಸಿದ್ದರಾಮಯ್ಯ, ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಕುಟುಕಿದರು.
ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಸಿ.ಟಿ. ರವಿ ಹಗಲುಗನಸು ಕಾಣುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಈ ಬಾರಿ ಸರ್ಕಾರ ರಚಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ನೂತಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಸಿಎಂ ಹೇಳಿದರು.
ಕಾಂಗ್ರೆಸ್ ಪಕ್ಷ ಉಚಿತ ಭಾಗ್ಯಗಳ ಹೆಸರಿನಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ವಂಚಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಸಿದ್ದರಾಮಯ್ಯ ಇದೇ ವೇಳೆ ಅಲ್ಲಗಳೆದರು. “ನಾವು ಸುಮ್ಮನೆ ಉಚಿತ ಭಾಗ್ಯಗಳನ್ನು ಘೋಷಣೆ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದಾಗ ಏನು ಜಾರಿ ಮಾಡುತ್ತೀವೋ ಅದನ್ನೇ ಹೇಳುತ್ತಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದರು.
ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ
ಚಾಮರಾಜನಗರದಲ್ಲಿ 2020ರಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಬಲಿಯಾಗಿದ್ದರೆನ್ನಲಾದ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯತೆ ಇದೆ ಎಂಬುದು ಕಾಂಗ್ರೆಸ್ ಆರೋಪ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವ್ಯಾಪಕ ಭ್ರಷ್ಟಾಚಾರ ನಡೆಸಿತು ಎಂದೂ ಕೈ ಪಾಳಯ ಪದೇ ಪದೇ ಆರೋಪ ಮಾಡುತ್ತಾ ಬಂದಿದೆ. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಡಾ. ಸುಧಾಕರ್, “ಹಗರಣ ಮಾಡಿರುವುದು ಸಾಬೀತಾದರೆ ಪಬ್ಲಿಕ್ನಲ್ಲಿ ನೇಣಿಗೆ ಹಾಕಿ” ಎಂದು ಸವಾಲು ಹಾಕಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ಟಾಂಟ್ ನೀಡಿದ್ದಾರೆ.
“ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ. ಆತ ಬದುಕಿರಲಿ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನರು ಮೃತಪಟ್ಟರು. ಆದರೆ, ಮೂವರು ಮಾತ್ರ ಸತ್ತಿದ್ದು ಎಂದು ಸುಧಾಕರ್ ಸುಳ್ಳು ಹೇಳುತ್ತಿದ್ದ. ಆತ ಸಚಿನಾಗಲು ಲಾಯಕ್ಕಿಲ್ಲ. ಮೊದಲು ಆರೋಗ್ಯ ಇಲಾಖೆಯಲ್ಲಿನ ಹಗರಣದ ಬಗ್ಗೆ ತನಿಖೆ ಆಗಲಿ. ಆಗ ಸುಧಾಕರ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗುತ್ತದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾಧ್ವನಿ ಸಮಾವೇಶ
ಚಾಮರಾಜನಗರದ ರೇಷ್ಮೆ ಕಾರ್ಖಾನೆ ಪಕ್ಕದ ಆವರಣದಲ್ಲಿ ಆಯೋಜಿಸಲಾದ ಪ್ರಜಾಧ್ವನಿ ಸಮಾವೇಶಕ್ಕೆ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಮಾಜಿ ಸಂಸದ ಆರ್ ಧ್ರುವನಾರಾಯಣ, ಕೇರಳ ಕಾಂಗ್ರೆಸ್ ಉಸ್ತುವಾರಿ ಅರುಣ್ ಕುಮಾರ್, ಶಾಸಕ ಸತೀಶ್ ಜಾರಕಿಹೊಳಿ, ಶಾಸಕ ಸಿ ಪುಟ್ಟರಂಗಶೆಟ್ಟಿ, ಶಾಸಕ ಆರ್ ನರೇಂದ್ರ, ಗುಂಡ್ಲುಪೇಟೆ ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದಾರೆ.