ಬೆಂಗಳೂರು, ಮಾ.2: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಲಾದ ಮನೆ ಹಂಚಿಕೆ ಮತ್ತು ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ (PM Awas Yojana – PMAY) ನಿರ್ಮಾಣಗೊಂಡ ಮನೆಗಳನ್ನು ಲೋಕಾರ್ಪಣೆ ಮಾಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು. ಬಳಿಕ ಕೇಂದ್ರದ ಯೋಜನೆಯನ್ನೇ ಟೀಕೆ ಮಾಡಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿರ್ಮಾಣಗೊಳುತ್ತಿರುವ 1,80,253 ಮನೆಗಳ ಪೈಕಿ ಬೀದರ್ , ಕಲಬುರಗಿ, ಬಾಗಲಕೋಟೆಯಲ್ಲಿ ನಿರ್ಮಾಣಗೊಂಡ 36789 ಮನೆಗಳನ್ನು ಸಿದ್ದರಾಮಯ್ಯ ಅವರು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಐದು ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.
ಈ ವೇಳೆ, ವಸತಿ ಸಚಿವ ಜಮೀರ್ ಅಹ್ಮದ್, ಬೈರತಿ ಸುರೇಶ್, ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಗೋವಿಂದರಾಜು, ಮಾಜಿ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಮನೆಗಳಿಗೆ ಚಾಲನೆ ನೀಡಿ, ಹಕ್ಕುಪತ್ರ ವಿತರಣ ಮಾಡಿದ ನಂತರ ಸಿದ್ದರಾಮಯ್ಯ ಅವರು ಭಾಷಣಕ್ಕೆ ನಿಂತಾಗ ಕಾರ್ಯಕರ್ತರು ಜೈ ಭೀಮ್ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅವರು ಕೂಡ ಜೈ ಭೀಮ್ ಎಂದು ಘೋಷಣೆ ಕೂಗಿ ಮಾತು ಆರಂಭಿಸಿದರು.
ನಾನು ಮೊದಲೇ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಮೈಸೂರಿನಲ್ಲೇ ರಾತ್ರಿ 10:30ರವರೆಗೆ ಕಾರ್ಯಕ್ರಮ ಇತ್ತು ಹೀಗಾಗಿ ಬರಲು ಆಗಿಲ್ಲ. ಇಂದ ಬಂದ ಕೂಡಲೇ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಎರಡೂ ಆಸ್ಪತ್ರೆಗಳಿಗೆ ಹೋಗಿದ್ದರಿಂದ ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಯಿತು. ನೀವೆಲ್ಲ ಬೆಳಗ್ಗೆಯೇ ಬಂದಿದ್ದೀರಿ, ಊಟದ ಸಮಯವೇ ಮೀರಿ ಹೋಗಿದೆ. ಜನರೆಲ್ಲ ಊಟ ಮಾಡಲು ಹೋಗಿದ್ದಾರೆ ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಶಂಕಿತನ ಬಗ್ಗೆ ವಿವರಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಈಗಾಗಲೇ ಮನೆಗಳನ್ನ ವಿತರಣೆ ಮಾಡಲಾಗಿದೆ. 28 ಜಿಲ್ಲೆಗಳಲ್ಲಿ 36,789 ಮನೆಗಳನ್ನ ಮೊದಲ ಹಂತದಲ್ಲಿ ಹಂಚಿಕೆ ಮಾಡುತ್ತಿದ್ದೇವೆ. ಒಂದೇ ದಿನ ಎಲ್ಲ ಜಿಲ್ಲೆಗಳಲ್ಲೂ ಹಂಚಿಕೆ ಆಗುತ್ತಿದೆ. ಬೆಂಗಳೂರಿನಲ್ಲಿ ನಾನು, ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಶಾಸಕರಿಂದ ಮನೆ ಹಂಚಿಕೆ ಆಗುತ್ತಿದೆ. 1,80,253 ಮನೆಗಳನ್ನ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡುತ್ತಿದ್ದೇವೆ ಎಂದರು.
ನಮ್ಮ ಈ ಹಿಂದಿನ ಸರ್ಕಾರದ ಅವಧಿಯಲ್ಲಿ (2013-18) ರಾಜ್ಯದಲ್ಲಿ ವಸತಿ ಹೀನರಿಗೆ ಪ್ರತಿ ವರ್ಷ 3 ಲಕ್ಚ ಮನೆ ಕೊಡಬೇಕು ಅಂತ ತೀರ್ಮಾನ ಮಾಡಿದ್ದೆವು. 5 ವರ್ಷದಲ್ಲಿ 14 ಲಕ್ಷ 54 ಸಾವಿರ ಮನೆಗಳನ್ನ ಬಡವರಿಗೆ ನೀಡಿದ್ದೇವೆ. ಆದರೆ ಬಿಜೆಪಿ, ಕುಮಾರಸ್ವಾಮಿ ಅವರು 5 ಲಕ್ಷದ 23 ಸಾವಿರ ಮನೆಗಳನ್ನ ಕಟ್ಟಿಸಿದ್ದಾರೆ. ನಮಗಿಂತ 10 ಲಕ್ಷ ಮನೆಗಳನ್ನ ಕಡಿಮೆಯಾಗಿ ಕಟ್ಟಿದ್ದರು. ಆದರೆ ಉದ್ದುದ್ದ ಭಾಷಣಗಳನ್ನು ಮಾತ್ರ ಮಾಡುತ್ತಾರೆ ಎಂದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ನಿರ್ಮಾನಗೊಂಡ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧವೇ ಟೀಕೆ ಮಾಡಿದರು. ಈ ಯೋಜನೆಗೆ ಯಾವ ಹೆಸರು ಗೊತ್ತಾ? ಇದು ಪ್ರಧಾನಿ ಮಂತ್ರಿ ಆವಾಸ್ ಯೋಜನೆ, ಸರ್ವರಿಗೂ ಸೂರು. ಆದರೆ ಕೇಂದ್ರದಿಂದ ಬರುವುದು 1 ಲಕ್ಷದ 50 ಸಾವಿರ ಮಾತ್ರ. ಒಂದು ಮನೆಗೆ 6 ರಿಂದ 7.5 ಲಕ್ಷ ರೂ. ಖರ್ಚು ಆಗುತ್ತದೆ. ಇದಕ್ಕಿಂತ ದೊಡ್ಡ ಮೋಸ ಯಾವುದಾದರೂ ಇದ್ಯಾ? ಇದರ ಜೊತೆಗೆ 1 ಲಕ್ಷದ 50 ಸಾವಿರ ರೂ. ಜಿಎಸ್ಟಿ ಸಂಗ್ರಹ ಮಾಡುತ್ತಾರೆ. ಬಾಕಿ ಉಳಿದದ್ದು ಎಷ್ಟು 12 ಸಾವಿರ ರೂ. ಏನು ಪೂರ್ಣಿಮಾ ಈ ಯೋಜನೆಗೆ ಅವರ ಹೆಸರ ಇಡಬೇಕಾ? ಎಂದು ಪ್ರಶ್ನಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, 10 ವರ್ಷಗಳ ಕನಸನ್ನ ಸಿದ್ದರಾಮಯ್ಯ ಅವರು ನನಸು ಮಾಡಿದ್ದಾರೆ. ಒಂದು ಮನೆ ಕಟ್ಟಲು 6.5 ಲಕ್ಷ ರೂ. ಬೇಕಾಗುತ್ತದೆ. ಒಂದು ಮನೆ ನಿರ್ಮಾಣಕ್ಕೆ ಕೇಂದ್ರ ಕೊಡುವುದು ಕೇವಲ 1 ಲಕ್ಷ ರೂ. ಅಷ್ಟೆ. ರಾಜ್ಯ ಸರ್ಕಾರದಿಂದಲೂ 1 ಲಕ್ಷ ರೂ. ಕೊಡಲಾಗುತ್ತದೆ. ಬಾಕಿ ಉಳಿದ 4.5 ಲಕ್ಷ ರೂ. ಬಡವರು ಕಟ್ಟಲು ಆಗಲ್ಲ ಎಂದರು.
ಸರ್ಕಾರ ನೀಡುವ ಅನುದಾನದಲ್ಲಿ ಬಡವರಿಗೆ ಮನೆ ಕಟ್ಟಲು ಆಗಲ್ಲ ಅಂತ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿದೆ. ಸರ್ಕಾರದ ವತಿಯಿಂದ ನಾನು 5 ಲಕ್ಷ ಕೊಡುತ್ತೇನೆ ಅಂತ ಸಿದ್ದರಾಮಯ್ಯ ಅವರು 500 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ಇದು ನಮ್ಮ ಸರ್ಕಾರದ ಐದನೇ ಗ್ಯಾರೆಂಟಿ ಯೋಜನೆ ಎಂದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮನೆ ಕೊಡಲಿಲ್ಲ, ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಬೊಮ್ಮಾಯಿ, ಯಡಿಯೂರಪ್ಪನವರಿಗೆ ಬಡವರ ಕಷ್ಟ ಕಾಣಲಿಲ್ಲ. ಬಡವರ ಬಗ್ಗೆ ಕಾಳಜಿ ಇದ್ದ ಕಾರಣ 36 ಸಾವಿರ ಮನೆಗಳನ್ನ ನಾವು ಕೊಡುತ್ತಿದ್ದೇವೆ. ಬಾಕಿ ಹಣ ಬಿಡುಗಡೆ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಮನೆ ಬೇಗ ಮನೆ ನಿರ್ಮಾಣ ಮಾಡುತ್ತೇವೆ. ಒಂದು ವರ್ಷದಲ್ಲೇ ಬಾಕಿ ಮನೆಗಳ ನಿರ್ಮಾಣ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sat, 2 March 24