ಬೆಂಗಳೂರು, (ನವೆಂಬರ್ 25): ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಉಮೇದುವಾರಿಕೆ ವಾಪಸ್ ಪಡೆದುಕೊಂಡಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಬಂಪ್ ಗಿಫ್ಟ್ ನೀಡಲಾಗಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಶಿಗ್ಗಾಂವಿ ಉಪಚುನಾವಣೆ ವೇಳೆ ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಎರಡೇ ದಿನದಲ್ಲಿ ಖಾದ್ರಿ ಅವರಿಗೆ ಈ ಗಿಫ್ಟ್ ನೀಡಿದ್ದಾರೆ.
ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆ ಟಿಕೆಟ್ ಗಾಗಿ ಖಾದ್ರಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಯಾಸೀರ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿತ್ತು, ಇದರಿಂದ ಪಕ್ಷದ ವಿರುದ್ಧ ಸಿಡಿದೆದ್ದಿದ್ದ ಖಾದ್ರಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಮನವೊಲಿಸಿದರು ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ: ಟಿಕೆಟ್ ಸಿಗಲಿಲ್ಲವೆಂಬ ಬೇಸರವಿತ್ತು, ಆದರೆ ಪಠಾಣ್ ಗೆಲುವು ಸಂತಸ ತಂದಿದೆ: ಅಜ್ಜಂಪೀರ್ ಖಾದ್ರಿ
ಕೊನೆಗೆ ಖಾದ್ರಿ ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಸಂಧಾನ ಮಾಡಿದ್ದರು. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿ ಮನವೊಲಿಸಿದ್ದರು. ಬಳಿಕ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟು ಖಾದ್ರಿ ಅವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಯಾಸೀರ್ ಖಾನ್ ಪಠಾಣ್ ಅವರ ಪರವಾಗಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಯಾಸೀರ್ ಖಾನ್ ಪಠಾಣ್ ಅವರು ಗೆಲ್ಲುತ್ತಿದ್ದಂತೆಯೇ ಖಾದ್ರಿ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರವಾಣೆ ಕರೆ ಮಾಡಿ ಫಲಿತಾಂಶದ ವಿವರ ನೀಡಿದ್ದರು. ಇದಕ್ಕೆ ಸಿಎಂ ಸಹ ಖಾದ್ರಿಗೆ ಅಭಿನಂದನೆ ತಿಳಿಸಿದ್ದರು. ಇದೀಗ ಖಾದ್ರಿ ಅವರಿಗೆ ಸಿದ್ದರಾಮಯ್ಯ ಕೊಟ್ಟ ಭರವಸೆಯನ್ನು ಫಲಿತಾಂಶ ಪ್ರಕಟವಾದ ಎರಡನೇ ದಿನದಲ್ಲಿ ಈಡೇರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Mon, 25 November 24