ಚಾಮರಾಜನಗರ, (ಮಾರ್ಚ್ 12): ರಾಜ್ಯದ ಗಮನ ಸೆಳೆದಿರುವ ಮೈಸೂರು-ಕೊಡಗು(Mysore-Kodagu) ಲೋಕಸಭಾ(Loka Saba) ಕ್ಷೇತ್ರದ ಬಿಜೆಪಿ(BJP) ಅಭ್ಯರ್ಥಿ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಸಂಸದ ಪ್ರತಾಪ್ ಸಿಂಹ(PrathapSimha) ಬದಲಿಗೆ ರಾಜವಂಶಸ್ಥ ಯದುವೀರ್ ಒಡೆಯರ್(Yaduveer) ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇದರ ಮಧ್ಯೆ ಸಿದ್ದರಾಮಯ್ಯ ( Siddaramaiah) ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಡುವಿನ ಹೊಂದಾಣಿಕೆ ರಾಜಕಾರಣ ಎಂಬ ಆರೋಪಗಳು ವ್ಯಕ್ತವಾಗಿವೆ. ಇದಕ್ಕೆ ಇದೀಗ ಸ್ವತಃ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಯಾವನೋ ಒಬ್ಬ ದಾರಿಯಲ್ಲಿ ಹೋಗುವವರು ಹೇಳಿದ್ರೆ ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕಾರಣ (Adjustment Politics) ನಡೆದಿದೆ ಎಂಬ ಸಂಸದ ಪ್ರತಾಪ್‌ಸಿಂಹ ಅವರ ಆರೋಪದ ಬಗ್ಗೆ ಚಾಮರಾಜನಗರದ ಹೆಗ್ಗವಾಡಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಯಾವನೋ ಒಬ್ಬ ದಾರಿಯಲ್ಲಿ ಹೋಗುವವರು ಹೇಳಿದ್ರೆ ಆಗಲ್ಲ. ಈಗ ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯವರು ಟಿಕೆಟ್ ನಿರಾಕರಿಸಿದ್ದಾರಲ್ಲಾ ಯಾಕೆ? ನಾನು ಹೊಂದಾಣಿಕೆ ಮಾಡಿದ್ನಾ? ಯದುವೀರ್ ಒಡೆಯರ್ (Yaduveer Odeyar) ಅವರಿಗೆ ನಾನು ಬಿಜೆಪಿಗೆ ಹೋಗಿ ನಿಲ್ಲು ಅಂತ ಹೇಳಿದ್ನಾ? ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ ಅಂತ ಅವರಿಗೆ ಟಿಕೆಟ್ ಕೊಡ್ತಿಲ್ಲ ಅನ್ಸುತ್ತೆ. ಅದನ್ನು ಬಿಟ್ಟು ನೀವೇ ಸೃಷ್ಟಿ ಮಾಡಿ ಹೊಂದಾಣಿಕೆ ರಾಜಕೀಯ ಅಂತ ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ʻನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಹೋಗುತ್ತದೆʼ ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಲೇವಡಿಯ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಓಹ್… ಪ್ರತಾಪ್ ಸಿಂಹ ಎರಡು ಸಲ ಎಂಪಿ ಆಗಿದ್ದ ಅಲ್ವಾ? ಯಾಕೆ ನನ್ನ ಕುರ್ಚಿ ಅಲುಗಾಡಲಿಲ್ಲ.? ನಮಗೆ ಬಿಜೆಪಿ ಯಾರನ್ನ ಅಭ್ಯರ್ಥಿ ಮಾಡ್ತಾರೆ ಎನ್ನುವ ಪ್ರಶ್ನೆ ಇಲ್ಲವೇ ಇಲ್ಲ. ನಾವು ಬಿಜೆಪಿಯನ್ನು ಸೋಲಿಸಬೇಕು ಅಷ್ಟೇ. ಎಂದ ಅವರು, ನಾವು ಕಾಂಗ್ರೆಸ್ ಬಡವರ ಪರ ನೀಡಿರುವ ಅಭಿವೃದ್ಧಿಗಳ ಮೇಲೆ ಅವಲಂಬನೆ ಆಗಿದ್ದೇವೆ ಹೊರತು ಬಿಜೆಪಿ ಅಭ್ಯರ್ಥಿ ಮೇಲೆ ಅಲ್ಲ. ನಾವು ಬಿಜೆಪಿ ನ ಸೋಲಿಸುತ್ತೇವೆ ಅಷ್ಟೆ ಎಂದರು.
ಸಿಎಎ ಜಾರಿಗೆ ಬಗ್ಗೆ ಸಿಎಂ ಹೇಳಿದ್ದೇನು?
ಸಿಎಎ ಜಾರಿಯ ಹಿಂದೆ ರಾಜಕೀಯ ಉದ್ದೇಶ ಇದೆ. ಚುನಾವಣೆಗಾಗಿ ಅದನ್ನು ಜಾರಿ ಮಾಡಿದ್ದಾರೆ. ಅವರು ಇಷ್ಟು ದಿನ ಯಾಕೆ ಮಾಡಿರಲಿಲ್ಲ.? ಎಂದು ಕೇಳಿದ ಸಿದ್ದರಾಮಯ್ಯ ಅವರು, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಕೊಡುತ್ತಿದೆ ಎನ್ನುವ ಆರ್. ಅಶೋಕ್ ಆರೋಪಕ್ಕೂ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ ಅವರು, ʻʻಅದೆಲ್ಲ ಸುಳ್ಳು. ನೀರು ಬಿಡುವುದಕ್ಕೆ ನೀರು ಎಲ್ಲಿದೆ? ನಾವು ತಮಿಳುನಾಡಿಗೆ ಒಂದು ತೊಟ್ಟು ನೀರನ್ನು ಕೊಡಲ್ಲ. ಅವರು ಸಹ ನಮ್ಮಿಂದ ನೀರು ಕೇಳಿಲ್ಲ. ತಮಿಳುನಾಡಿನವರೂ ಕೇಳಿದ್ರೂ ಕೊಡಲ್ಲ, ಕೇಂದ್ರದವರು ಹೇಳಿದ್ರೂ ಕೊಡಲ್ಲ. ಅಲ್ಲದೆ ನೀರು ಎಲ್ಲಿದೆ ಬಿಡುವುದಕ್ಕೆ ಡ್ಯಾಂ ಖಾಲಿ ಇದೆ ಎಂದರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ