ಬೆಂಗಳೂರು: ಪ್ರತಿಪಕ್ಷ ನಾಯಕ ಮತ್ತು ರಾಜ್ಯ ಸರ್ಕಾರದ ನಡುವಿನ ಸಮರ ಕಡಿಮೆಯಾಗುವ ಬದಲು ಮತ್ತಷ್ಟು ತಾರಕಕ್ಕೇರುತ್ತಿದೆ. ಸಿದ್ದರಾಮಯ್ಯ ಮಾಡಿದ ಭಷ್ಟಾಚಾರ ಆರೋಪಗಳಿಗೆ ರಾಜ್ಯ ಸರ್ಕಾರದ 5 ಮಂದಿ ಹಿರಿಯ ಸಚಿವರು ತಿರುಗೇಟು ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಇವತ್ತು ಮತ್ತೇ ಯಡಿಯೂರಪ್ಪ ಸರ್ಕಾರದ ವಿರುದ್ಧ ಬುಸುಗುಟ್ಟಿದ್ದಾರೆ.
ಹೌದು ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಅದ್ರಲ್ಲೂ ಒಂದು ಕಾಲದ ತಮ್ಮ ಶಿಷ್ಯ ಕೆ ಸುಧಾಕರ್ ಮೇಲೆ ಕೆಂಡಾಮಂಡಲವಾದ್ರು. ಕಾರ್ಮಿಕ ಇಲಾಖೆಯ ಫುಡ್ ಪ್ಯಾಕೆಟ್ಸ್ ಕೊಡುವಾಗ ಅವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದು, ಅವತ್ತು ನೋಡಿದ್ರೆ ಕೋವಿಡ್‌ಗೆ ಬರೀ 324 ಕೋಟಿ ಖರ್ಚು ಮಾಡಿದ್ದೇವೆ ಅಂತ ಹೇಳಿದ್ದರಿ. ನಿನ್ನೆ ನೋಡಿದ್ರೆ 2018 ಕೋಟಿ ಅಂತಾ ಹೇಳಿದ್ದಿರಿ, ಸರ್ಕಾರದಲ್ಲಿರುವ ಸಚಿವರಿಗೇ ನಿಖರ ಮಾಹಿತಿ ನೀಡಿಲ್ಲ ಅಂದ್ರೆ ಕಳ್ಳತನ ಆಗಿದೆ ಅಂತಲ್ವಾ ಅರ್ಥ ಎಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.
ಸುಧಾಕರ್ ಇಲಾಖೆಯ 815 ಕೋಟಿ ಪ್ರಸ್ತಾಪ ಅವರದೇ ದಾಖಲೆಯಲ್ಲಿ ಇರೋದು. ನಂಗೆ ಏನೂ ಗೊತ್ತಿಲ್ಲದೇ ಟಿಕೆಟ್ ಕೊಡಿಸಿದೆನಾ? ಅಧಿಕಾರ ಇದೆ ಅಂತ ಬಾಯಿಗೆ ಬಂದಂಗೆ ಮಾತಾಡಬಾರದು, ನಂಗೇ ಪಾಠ ಹೇಳಿಕೊಡೋದಾ?
ಅಧಿಕಾರದ ಅಹಂನಿಂದ ಸುಧಾಕರ್ ಹೀಗೆಲ್ಲ ಮಾತಾಡ್ತಿದ್ದಾರೆ. ಅಪ್ರೂವ್ ಅಂದ್ರೆನು, ಸ್ಯಾಂಕ್ಷನ್ ಅಂದ್ರೇನು, ಎಕ್ಸ್‌ಪೆಂಡಿಚರ್ ಅಂದ್ರೇನು ಇದೆಲ್ಲ ಗೊತ್ತಿಲ್ಲ ನಂಗೆ, ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ? ಎಂದು ಸುಧಾಕರ್ ಅವರತ್ತ ವ್ಯಂಗ್ಯದ ಬಾಣ ಬೀಸಿದರು.
ನಾನು 14 ದಾಖಲಾತಿಗಳನ್ನು ಕೊಟ್ಟಿದ್ದೆ, ಅವರೇನಾದರೂ ದಾಖಲಾತಿ ಕೊಟ್ಟರಾ? ನಿನ್ನೆ ಅವರು ಬಿಡುಗಡೆ ಮಾಡಿದ ದಾಖಲೆ ನನ್ನ ಸರ್ಕಾರದ್ದಾ? ನಾನು ಸಿಎಂ ಆಗಿದ್ದೇನಾ ಆಗ..? ಯಾವಾಗ ತಪ್ಪು ಮಾಡಿದ್ರು ತಪ್ಪೆ, ಯಾರು ತಪ್ಪು ಮಾಡಿದ್ರೂ ತಪ್ಪೆ? ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.