ಸಿಎಂ ಜನಸ್ಪಂದನಾ ಕಾರ್ಯಕ್ರಮ: 4,321 ಅರ್ಜಿ ವಿಲೇವಾರಿ; ಬಾಕಿ 10 ಸಾವಿರ ಅರ್ಜಿಗಳ ವಿಲೇವಾರಿಗೆ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 8 ರಂದು ವಿಧಾನಸೌಧದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ್ದರು. ಸಾವಿರಾರು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ಕೆ ಅತೀಕ್, ಸಿಎಂ ನಡೆಸಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ 4,321 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದರು. ಅಲ್ಲದೆ, ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳನ್ನು ಅಭಿನಂದಿಸಿದರು.
ಬೆಂಗಳೂರು, ಫೆ.19: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಫೆಬ್ರವರಿ 8 ರಂದು ವಿಧಾನಸೌಧದಲ್ಲಿ ಜನಸ್ಪಂದನಾ (Janaspandana) ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ 4,321 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ಕೆ ಅತೀಕ್ ಮಾಹಿತಿ ನೀಡಿದರು. ಅಲ್ಲದೆ, ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳನ್ನು ಅಭಿನಂದಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮದ ಪರಾಮರ್ಶೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅತೀಕ್, ಫೆಬ್ರವರಿ 8 ರಂದು ಸ್ವೀಕರಿಸಿದ್ದ 14,685 ಅರ್ಜಿಗಳ ಪೈಕಿ 4,321 ಅರ್ಜಿ ವಿಲೇವಾರಿ ಮಾಡಲಾಗಿದೆ. ಬಾಕಿ ಅರ್ಜಿಗಳ ಸಕಾರಾತ್ಮಕ ಕ್ಷಿಪ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದಿನ ಹಂತದಲ್ಲಿ ವಿಭಾಗ ಮಟ್ಟದಲ್ಲಿ ಜನಸ್ಪಂದನಾ ನಡೆಸಲು ತೀರ್ಮಾನ ಮಾಡಲಾಗಿದೆ. ಜನಸ್ಪಂದನ ಕಾರ್ಯಕ್ರಮ ಯಶಸ್ಸಿಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಬೇಕೆಂದು ಅಪೇಕ್ಷಿಸಿದ್ದಾರೆ. ವಿಭಾಗ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ನಡೆಸಲು ಚಿಂತನೆ ಮಾಡಲಾಗಿದೆ. ಮೊದಲು ಕಲಬುರಗಿಯಲ್ಲಿ ಜನಸ್ಪಂದನಾ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಖುದ್ದು ಭಾಗವಹಿಸಲು ಸೂಚಿಸಲಾಗುವುದು ಎಂದರು.
ಇದನ್ನೂ ಓದಿ: ಎಫ್ಐಆರ್ ರದ್ದು ಕೋರಿ ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್
ಕಾರ್ಯಕ್ರಮ ದೇಶಕ್ಕೆ ಮಾದರಿಯಾಗುವಂತೆ ನಡೆಯಬೇಕೆಂದು ಅಧಿಕಾರಿಗಳುಗೆ ಸೂಚನೆ ನೀಡಿದ ಅತೀಕ್, ಅಹವಾಲುಗಳೊಂದಿಗೆ ಆಗಮಿಸುವ ಜನರ ಕುರಿತು ಕಾಳಜಿ ವಹಿಸಬೇಕು. ಅವರ ನೋವಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂಬ ಸಂತೃಪ್ತಿ ಮೂಡಬೇಕು. ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಅಹವಾಲಿಗೆ ಸ್ಪಷ್ಟ ಹಿಂಬರಹ ನೀಡಬೇಕು ಎಂದರು.
ಅಧಿಕಾರಿಗಳಿಗೆ ಅತೀಕ್ ಎಚ್ಚರಿಕೆ
ನಿಯಮಾನುಸಾರ ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಅಹವಾಲುಗಳಿಗೆ ಸ್ಪಷ್ಟ ಹಿಂಬರಹ ನೀಡಬೇಕು. ಮನವಿದಾರರು ಪದೇ ಪದೇ ಜನಸ್ಪಂದನ ಕಾರ್ಯಕ್ರಮಕ್ಕೆ ಅದೇ ಅಹವಾಲಿನೊಂದಿಗೆ ಆಗಮಿಸುವಂತಾಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Mon, 19 February 24