ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹಿಳಾ ಸಮಾವೇಶದಲ್ಲಿ ವನಿತೆಯರಿಗೆ ಮತ್ತು ರೈತರಿಗೆ ಖುಷಿ ತರುವ ಆಶ್ವಾಸನೆಗಳನ್ನು ನೀಡಿದ್ದಾರೆ. ಮಹಿಳೆಯರಿಗೆ ನೀಡಲಾಗುತ್ತಿರುವ 50 ಸಾವಿರ ರೂ ಬಡ್ಡಿರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ರೈತರಿಗೂ ನೀಡಲಾಗುತ್ತಿರುವ ಬಡ್ಡಿರಹಿತ ಸಾಲವನ್ನು 5 ಲಕ್ಷಕ್ಕೆ ಏರಿಸುತ್ತೇವೆ. ಶೇ. 3ರ ಬಡ್ಡಿಯಲ್ಲಿ ರೈತರಿಗೆ ನೀಡುವ ಸಾಲವನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗೆ ಏರಿಸುತ್ತೇವೆ ಎಂದು ಮಹಿಳಾ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಷರತ್ತುಬದ್ಧ ಸಾಲಮನ್ನಾ ಮಾಡಲಾಗುವುದು ಎಂದಿದ್ದಾರೆ. ಸರಿಯಾಗಿ ಸಾಲದ ಕಂತು ಕಟ್ಟುತ್ತಿರುವವರ ಸಾಲವನ್ನು ಮನ್ನಾ ಮಾಡಲಾಗುವುದು ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೂ ಸಾಲದ ಕಂತು ಕಟ್ಟಿ ಎಂದು ರೈತರಿಗೆ ತಿಳಿಸಿದರು.
ಬಡ್ಡಿರಹಿತ ಸಾಲದ ಪ್ರಮಾಣ ಏರಿಸುವ ಬಗ್ಗೆ ಮತ್ತು ಸಾಲ ಮನ್ನಾ ಬಗ್ಗೆ ಪಕ್ಷದ ಪ್ರಣಾಳಿಕೆ ಕಮಿಟಿ ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದೂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ವಿರುದ್ಧ ಗುಡುಗು:
ರಾಜ್ಯದಲ್ಲಿ ಮತ್ತು ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಹಾಲು, ಮೊಸರು, ಅಕ್ಕಿ ಸೇರಿದಂತೆ ಮಕ್ಕಳು ಓದು ಪೆನ್ನು ಪುಸ್ತಕಗಳ ಮೇಲೂ ತೆರಿಗೆ ವಿಧಿಸಿದೆ ಎಂದ ಸಿದ್ದರಾಮಯ್ಯ, ಮೋದಿ ಸರ್ಕಾರ ಬಂದ ಮೇಎಲ ಉದ್ಯಮಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Mid-day Meals: ಶಾಲಾ ಮಕ್ಕಳಿಗೆ ಮೊಟ್ಟೆ ನಿಲ್ಲಿಸಲಾಗುತ್ತಾ? ಪರಿಷತ್ನಲ್ಲಿ ಶಿಕ್ಷಣ ಸಚಿವರು ಕೊಟ್ಟ ಉತ್ತರ ಇದು
ನೀವು ಶ್ರೀಮಂತರ ತೆರಿಗೆ ಕಡಿಮೆ ಮಾಡಿ ಬಡವರ ತೆರಿಗೆ ಹೆಚ್ಚಿಗೆ ಮಾಡಬಾರದು ಎಂದು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ತಿವಿದರು.
ರಾಜ್ಯ ಬಿಜೆಪಿ ನಾಯಕರನ್ನೂ ಸಿದ್ದರಾಮಯ್ಯ ಇದೇ ವೇಳೆ ತರಾಟೆಗೆ ತೆಗೆದುಕೊಂಡರು. ಒಮ್ಮೆ ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಉಗ್ರಪ್ಪ ಕೇಳಿದ್ದರು. ಅದಕ್ಕೆ ಯಡಿಯೂರಪ್ಪ, ತಾವೇನು ನೋಟು ಪ್ರಿಂಟು ಮಾಡುವ ಮೆಷೀನ್ ಇಟ್ಟುಕೊಂಡಿಲ್ಲ ಎಂದಿದ್ದರು. ನಾವು ಸಿಎಂ ಆಗಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದೇವೆ. ಇವರಿಗೇನು ರೋಗ ಬಂದಿದೆ ಎಂದು ಸಿದ್ದರಾಮಯ್ಯ ಕಟುವಾಗಿ ಕೇಳಿದರು.
ಸಾಲ ಮನ್ನಾ ಮಾಡಬಾರದು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆಗೆ ವ್ಯಗ್ರಗೊಂಡ ಸಿದ್ದರಾಮಯ್ಯ, ಮಿಸ್ಟರ್ ತೇಜಸ್ವಿ ಸೂರ್ಯ ನೀನು ಬಡವರ ಮೇಲೆ ಏಕೆ ಕೆಟ್ಟ ಕಣ್ಣು ಇಟ್ಟುಕೊಂಡಿದ್ದೀಯ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಏರ್ ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ? : ಹೆಚ್. ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ನೀಡಿದ ಭರವಸೆಗಳು:
* ಮಹಿಳೆಯರಿಗೆ ನೀಡುವ ಬಡ್ಡಿರಹಿತ ಸಾಲ 50 ಸಾವಿರ ರೂ ನಿಂದ 1 ಲಕ್ಷ ರೂಗೆ ಏರಿಕೆ
* ರೈತರಿಗೆ ಬಡ್ಡಿರಹಿತವಾಗಿ ನೀಡುವ 3 ಲಕ್ಷ ರೂ ಸಾಲದ ಮೊತ್ತ 10 ಲಕ್ಷಕ್ಕೆ ಏರಿಕೆ
* ಶೇ. 3ರಷ್ಟು ಬಡ್ಡಿ ಮೇಲೆ ನೀಡುವ ಸಾಲ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
* ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುತ್ತೇವೆ
* ಟೊಮ್ಯಾಟೊ ಮತ್ತು ಮಾವು ಸಂಸ್ಕರಣಾ ಘಟಕ ಮಾಡಿಕೊಡುತ್ತೇವೆ
* ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುತ್ತೇವೆ
* ಹಾಲಿಗೆ ಪ್ರೋತ್ಸಾಹ ಧನವನ್ನು 6 ರೂಪಾಯಿಗೆ ಹೆಚ್ಚಿಸುತ್ತೇವೆ
ಸಿದ್ದರಾಮಯ್ಯ ಈ ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತಾ ಕೋಲಾರದಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಪುನರುಚ್ಚರಿಸಿದರು. ತಾವು ಆಶೀರ್ವಾದ ಮಾಡಿದರೆ ತಾನು ಕೋಲಾರದಿಂದಲೇ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಅವರು ಕೋಲಾರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಟೆಂಪಲ್ ರನ್ ಮಾಡಿದರು.
Published On - 3:13 pm, Mon, 13 February 23