ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನಮ್ಸ್ ಟ್ರಸ್ಟ್ (TTD) ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಮಾಡಿಕೊಂಡಿರುವ ನೋಂದಣಿಯನ್ನು (FCRA registration) ಕೇಂದ್ರ ಗೃಹ ಸಚಿವಾಲಯವು ಅಮಾನತು ಮಾಡಿರುವುದರಿಂದ ವಿದೇಶಿ ಮೂಲದಿಂದ ಬಂದ ಕಾಣಿಕೆ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ, ವಿದೇಶಿ ದೇಣಿಗೆಯನ್ನು ‘ಹುಂಡಿ ಕಾಣಿಕೆ’ ಎಂದು ದೇಗುಲಕ್ಕೆ ಸಂಬಂಧಿಸಿದ ಖಾತೆಯಲ್ಲಿ ಜಮೆ ಮಾಡುವುದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿರ್ಬಂಧಿಸಿದೆ. ಪರಿಣಾಮವಾಗಿ ಸುಮಾರು 26 ಕೋಟಿ ರೂ. ಮೊತ್ತವನ್ನು ಖಾತೆಗೆ ಜಮೆ ಮಾಡಲು ಟಿಟಿಡಿಗೆ ಸಶಧ್ಯವಾಗುತ್ತಿಲ್ಲ ಎಂದು ಮಾಧ್ಯಮವೊಂದರ ವರದಿ ಉಲ್ಲೇಖಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಮಾಡಿಕೊಂಡಿರುವ ನೋಂದಣಿಯನ್ನು ಅಮಾನತುಗೊಳಿಸಲಾಗಿದೆ. ಇದರಿಂದಾಗಿ ತಿರುಪತಿ ದೇಗುಲಕ್ಕೆ ವಿದೇಶಗಳಿಂದ ಬಂದ ದೇಣಿಗೆಯನ್ನು ಹುಂಡಿ ಕಾಣಿಕೆ ಎಂದು ಜಮೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆ ಕೇಂದ್ರ ಸರ್ಕಾರ ದೇಗುಲಗಳನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವಾಲಯವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಿಂದೂ ವಿರೋಧಿ ಬಿಜೆಪಿ ಹ್ಯಾಷ್ಟ್ಯಾಗ್ (#AntiHinduBJP) ಅಡಿ ಸಿದ್ದರಾಮಯ್ಯ ಈ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, ಮೋದಿ ಅವರು ಉದ್ಯಮಿ ಅದಾನಿಗೆ ತೆರಿಗೆ ಸ್ವರ್ಗದಲ್ಲಿ ನೋಂದಾಯಿತವಾದ ಶೆಲ್ ಕಂಪನಿಗಳ ಮೂಲಕ ಅಕ್ರಮದ ಹಣವನ್ನು ಪಡೆಯಲು ಸುಗಮ ದಾರಿ ಮಾಡಿಕೊಟ್ಟಿದ್ದಾರೆ. ಆದರೆ, ಹುಂಡಿಗಳ ಮೂಲಕ ಸಂಗ್ರಹಿಸಿದ ವಿದೇಶ ಕರೆನ್ಸಿಗಳನ್ನು ಠೇವಣಿ ಇಡದಂತೆ ಟಿಟಿಡಿ ಖಾತೆಯನ್ನು ಅಮಾನತುಗೊಳಿಸಿದ್ದಾರೆ. ಇದು ಕೇಂದ್ರದ ಬಿಜೆಪಿ ಸರ್ಕಾರ ದೇಗುಲಗಳನ್ನು ನಡೆಸಿಕೊಳ್ಳುವ ರೀತಿ ಎಂದು ಮತ್ತೊಂದು ಟ್ವೀಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Siddaramaiah: ನಾನು ಬದುಕಿರುವವರೆಗೂ ಆರ್ಎಸ್ಎಸ್ ವಿರೋಧಿಸುತ್ತೇನೆ ಎಂದ ಸಿದ್ಧರಾಮಯ್ಯ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಬಿರುಸುಗೊಂಡಿವೆ. ಇದೇ ವೇಳೆ ತಿರುಪತಿ ದೇಗುಲದ ವಿಚಾರಕ್ಕೆ ಸಂಬಂಧಿಸಿದ ವರದಿ ಪ್ರಕಟವಾಗಿದ್ದು, ಬಿಜೆಪಿ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಎಂಬುದನ್ನು ನಿರೂಪಿಸಲು ಸಿದ್ದರಾಮಯ್ಯ ಇದನ್ನು ಬಳಸಿಕೊಂಡಿದ್ದಾರೆ.
ಸ್ವಯಂಸೇವಾ ಸಂಸ್ಥೆಗಳು ಅಥವಾ ಎನ್ಜಿಒಗಳು ವಿದೇಶಿ ದೇಣಿಗೆ ಸ್ವೀಕರಿಸುವುದರ ವಿರುದ್ಧ ಈ ಹಿಂದೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು. ಕೆಲವು ಎನ್ಜಿಒಗಳ ಮೂಲಕ ದೇಶಕ್ಕೆ ಹರಿದುಬರುವ ವಿದೇಶಿ ದೇಣಿಗೆ ದೇಶವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂಬ ಆರೋಪಗಳ ಮಧ್ಯೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ