ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ: ಕರ್ನಾಟಕ ಸಿಎಂ ಆಗ್ರಹವೇನು?

ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದು ವಿಬಿ-ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಹೊಸ ಕಾಯ್ದೆಯು MGNREGA ಅನುದಾನ ಹಂಚಿಕೆಯನ್ನು 90:10 ರಿಂದ 60:40ಕ್ಕೆ ಬದಲಿಸಿ, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರುತ್ತದೆ. ಇದು ಸಂವಿಧಾನದ 258 ಮತ್ತು 280ನೇ ವಿಧಿಗಳ ಉಲ್ಲಂಘನೆಯಾಗಿದ್ದು, ಸಹಕಾರಿ ಫೆಡರಲಿಸಂಗೆ ಮಾರಕವಾಗಿದೆ. ಕಾಯ್ದೆಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದಿರುವುದು ಸಹ ಖಂಡನೀಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪತ್ರ: ಕರ್ನಾಟಕ ಸಿಎಂ ಆಗ್ರಹವೇನು?
ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ
Edited By:

Updated on: Dec 30, 2025 | 6:45 PM

ಬೆಂಗಳೂರು, ಡಿಸೆಂಬರ್​​ 30: ವಿಬಿ-ಜಿ ರಾಮ್ ಜಿ ಕಾಯ್ದೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಹೊಸ ಕಾಯ್ದೆಯು ಉದ್ಯೋಗ ಖಾತರಿ ತತ್ವಕ್ಕೆ ಮಾರಕವಾಗಿದೆ. ಈ ಹಿಂದಿನ ಮನರೇಗಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ್ದು ಶೇ. 90 ಮತ್ತು ಶೇ.10 ರಾಜ್ಯದ ಹಂಚಿಕೆಯಿತ್ತು. ಆದರೆ ಈಗಿನ ಕಾಯ್ದೆಯು ರಾಜ್ಯ ಸರ್ಕಾರದ ಆರ್ಥಿಕತೆಗೆ ಹೊರೆಯಾಗಲಿದ್ದು, 258, 250ನೇ ವಿಧಿಯ ಉಲ್ಲಂಘನೆ ಆಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ?


ಪ್ರಸ್ತುತ MGNREGA ಚೌಕಟ್ಟಿನಡಿ, ಪ್ರಮುಖ ರಾಜ್ಯಗಳಲ್ಲಿ ಕೇಂದ್ರ–ರಾಜ್ಯಗಳ ನಡುವೆ 90:10ರ ಅನುದಾನ ಹಂಚಿಕೆಯ ವ್ಯವಸ್ಥೆ ಇದೆ. ಹೊಸ ಕಾಯ್ದೆಯು ಇದನ್ನು ಬಹುತೇಕ ರಾಜ್ಯಗಳಿಗೆ 60:40ಕ್ಕೆ ಬದಲಾಯಿಸಿದೆ. ಇದು ಈಗಾಗಲೇ ಜಿಎಸ್‌ಟಿ ಪರಿಹಾರದ ಕೊರತೆ ಹಾಗೂ ಅನ್ಯಾಯಕರ ಹಣಕಾಸು ವಿಂಗಡಣೆ ಕಾರಣದಿಂದ ಆರ್ಥಿಕ ಒತ್ತಡದಲ್ಲಿರುವ ರಾಜ್ಯಗಳ ಮೇಲೆ ಹೆಚ್ಚಿನ ಭಾರ ಹೇರುತ್ತಿದೆ. ಈ ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ‘G Ram G’ ಮಸೂದೆ ಅಂಗೀಕಾರ, ಮಸೂದೆ ಪ್ರತಿಯನ್ನು ಹರಿದು ಸ್ಪೀಕರ್ ಕಡೆ ಎಸೆದ ವಿಪಕ್ಷ ನಾಯಕರು 

ಬಿತ್ತನೆ ಹಾಗೂ ಕೊಯ್ಲಿನ ಗರಿಷ್ಠ ಕಾಲಘಟ್ಟದಲ್ಲಿ ಒಟ್ಟು 60 ದಿನಗಳ ಅವಧಿಯಲ್ಲಿ ಈ ಕಾಯ್ದೆಯಡಿ ಯಾವುದೇ ಕೆಲಸಗಳನ್ನು ಕೈಗೊಳ್ಳಬಾರದೆಂದು ರಾಜ್ಯಗಳು ಮುಂಚಿತವಾಗಿ ಅಧಿಸೂಚನೆ ಹೊರಡಿಸಬೇಕೆಂದು ಹೊಸ ಕಾಯ್ದೆಯು ಸೂಚಿಸುತ್ತದೆ. ಆ ಅವಧಿಯಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಬಹುದಾದರೂ ಇಂತಹ ಸಾಮಾನ್ಯ ನಿಷೇಧವು ಕೂಲಿ ಉದ್ಯೋಗಕ್ಕೆ ಅವಲಂಬಿತರಾಗಿರುವವರ, ವಿಶೇಷವಾಗಿ ಅತೀ ದುರ್ಬಲ ವರ್ಗಗಳಾದ ಆದಿವಾಸಿ ಮತ್ತು ಹಿಂದುಳಿದ ಸಮುದಾಯಗಳ ಹಕ್ಕನ್ನು ಕುಗ್ಗಿಸುತ್ತದೆ.

ಮುಖ್ಯವಾಗಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಆತುರವಾಗಿ ಜಾರಿಗೊಳಿಸಿರುವುದು ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಈ ವಿಧಿಗಳು, ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟುಗಳನ್ನು ಜಾರಿಗೊಳಿಸುವ ಮೊದಲು, ಹಣಕಾಸು ಫೆಡರಲಿಸಂ, ಸಮಾನ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತದ ಬಲವರ್ಧನೆಗೆ ಒತ್ತು ನೀಡುತ್ತಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತವೆ. ಇಂತಹ ನಡೆ ಸಹಕಾರಿ ಫೆಡರಲಿಸಂನ ಮೂಲಾಧಾರವನ್ನೇ ದುರ್ಬಲಗೊಳಿಸುತ್ತದೆ.

ಉದ್ಯೋಗ ಭರವಸೆ ಕಾಯ್ದೆ ಕೇವಲ ಕಲ್ಯಾಣ ಯೋಜನೆಯಲ್ಲ; ಅದು ಮಹಾತ್ಮ ಗಾಂಧಿಯವರ ಹೆಸರನ್ನು ಹೊತ್ತಿರುವ, ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಐತಿಹಾಸಿಕ ಹಾಗೂ ಜಾಗತಿಕವಾಗಿ ಪ್ರಶಂಸಿತ ಹಕ್ಕು ಆಧಾರಿತ ಕಾನೂನು. ಈ ಕಾಯ್ದೆಯಿಂದ ಅವರ ಹೆಸರನ್ನು ತೆಗೆದುಹಾಕುವುದು ದುರ್ಭಾಗ್ಯಕರ ಸಂದೇಶವನ್ನು ನೀಡುತ್ತದೆ ಮತ್ತು ಅದರ ನೈತಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ವಿಧಾನವು ಸಹಕಾರಿ ಒಕ್ಕೂಟದ ನಾಶಕ್ಕೆ ದಾರಿಯಾಗಿರುವ ಕಾರಣ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಸ್ಥಗಿತಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.