ಹೊಸ ವರ್ಷಕ್ಕೆ ಕೌಂಟ್ಡೌನ್: ಖಾಕಿ ಅಲರ್ಟ್; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ!
ಹೊಸ ವರ್ಷ 2026ರ ಸಂಭ್ರಮಾಚರಣೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಿದ್ಧತೆ ನಡೆದಿದೆ. ಅಹಿತಕರ ಘಟನೆ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಗರದಾದ್ಯಂತ ಹೆಚ್ಚುವರಿ ಸಿಸಿಟಿವಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ವ್ಯಾಪಾರ ವಹಿವಾಟು, ಆನ್‌ಲೈನ್ ಡೆಲಿವರಿಗೆ ಹೊಸ ವರ್ಷಾಚರಣೆ ಪರಿಣಾಮ ಬೀರಿದ್ದು, ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಲಾಗಿದೆ.

ಬೆಂಗಳೂರು, ಡಿಸೆಂಬರ್ 30: 2025ಕ್ಕೆ ಗುಡ್ ಬೈ ಹೇಳಿ, ಹೊಸ ವರ್ಷ 2026ರನ್ನು (New Year 2026) ಸ್ವಾಗತಿಸೋದಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿವೆ. ನ್ಯೂ ಇಯರ್ ಸಂಭ್ರಮಾಚರಣೆಗೆ ಬೆಂಗಳೂರು (bangaluru) ಸೇರಿ ರಾಜ್ಯಾದ್ಯಂತ ಜನರು ಸಜ್ಜಾಗಿದ್ದಾರೆ. ಪೊಲೀಸ್ ಇಲಾಖೆ ಕೂಡ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಿದೆ. ಎಣ್ಣೆ ಏಟಿನಲ್ಲಿ ಎಲ್ಲಾದರೂ ಮಲಗಿದರೆ ಪೊಲೀಸರೇ ಮನೆಗೆ ಬಿಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎಲ್ಲೆಡೆ ಪೊಲೀಸ್ ಹದ್ದಿನ ಕಣ್ಣು
ಹೊಸ ವರ್ಷಾಚರಣೆಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ ಸಂಜೆಯಿಂದಲೇ ವಿಶ್ವಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡಲಿದೆ. ಬೆಂಗಳೂರಿಗರೂ ನ್ಯೂ ಇಯರ್ ಸ್ವಾಗತಿಸೋದಕ್ಕೆ ಕಾತರರಾಗಿದ್ದಾರೆ. ಅತೀ ಹೆಚ್ಚು ಜನರು ಸೇರುವ ಎಂ.ಜಿ.ರೋಡ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿ ಹಲವೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಭದ್ರತಾ ಸಿದ್ಧತೆ: ಸಿಸಿಟಿವಿ ಕಣ್ಗಾವಲು
ಬ್ರಿಗೇಡ್ ರಸ್ತೆಯೊಂದರಲ್ಲೇ 360ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಿದ್ದು, ಬೆಂಗಳೂರು ನಗರದಾದ್ಯಂತ 6ಸಾವಿರ ಹೆಚ್ಚುವರಿ ಕ್ಯಾಮರಾ ಅಳವಡಿಸಲಾಗಿದೆ. ಹಲವೆಡೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳು ಭದ್ರತೆ ಬಗ್ಗೆ ಪರಿಶೀಲಿಸಿದ್ದಾರೆ.
ಎಲ್ಲಾದ್ರೂ ಮಲಗಿದ್ರೆ ಮನೆಗೆ ಬಿಡ್ತಾರೆ: ಡಿ.ಕೆ.ಶಿವಕುಮಾರ್
ಇನ್ನು ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಇಡೀ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂದರು. ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನೀವೇನಾದರೂ ಎಲ್ಲಾದರೂ ಮಲಗಿದರೆ ಪೊಲೀಸರೇ ಮನೆಗೆ ತಲುಪಿಸುತ್ತಾರೆ ಎಂದಿದ್ದಾರೆ.
ಹೋಟೆಲ್ಗಳೂ ಹೊಸ ವರ್ಷಾಚರಣೆಗೆ ಸಜ್ಜಾಗಿವೆ. ಡಿಸೆಂಬರ್ 31 ಮತ್ತು ಜನವರಿ 1ರಂದು ಬೆಂಗಳೂರಿನ ರೆಸ್ಟೋರೆಂಟ್ಗಳಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಿರೀಕ್ಷೆಯಿದೆ. ಆದರೆ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ ಸುತ್ತಮುತ್ತಲು ಮಾತ್ರ ವ್ಯಾಪಾರ ವಹಿವಾಟು ಡಲ್ ಹೊಡೆಯುವ ಭೀತಿಯಿದೆ. ಯಾಕಂದರೆ, ವಾಹನಗಳ ಓಡಾಟ ಹಾಗೂ ಪಾರ್ಕಿಂಗ್ ಬಂದ್ ಮಾಡೋದ್ರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಲಿದ್ದು, ರೆಸ್ಟೋರೆಂಟ್ಗಳಿಗೆ ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜು: ಪಬ್ಗಳಲ್ಲಿ ಹೇಗಿದೆ ಸುರಕ್ಷತಾ ಕ್ರಮ? ಇಲ್ಲಿದೆ ನೋಡಿ
ನ್ಯೂ ಇಯರ್ಗೆ ಭರ್ಜರಿ ಆನ್‌ಲೈನ್ ಬ್ಯುಸಿನೆಸ್ ಆಗಲಿದೆ. ಆದರೆ ಶೀಘ್ರ ಫುಡ್ ಡೆಲಿವರಿ ಒತ್ತಡಕ್ಕೆ ಸಿಲುಕಿ ಡೆಲಿವರಿ ಬಾಯ್ಸ್ ಹೆಣಗಾಡುವಂತಾಗಿದೆ. ಬೆಂಗಳೂರಿನ ಕೋರಮಂಗಲದ ಪಬ್, ಬಾರ್ಗಳು ಎಷ್ಟು ಸೇಫ್ ಅನ್ನೋದ್ರ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದೆ.
ಬೆಂಗಳೂರಿನಲ್ಲಷ್ಟೇ ಅಲ್ಲ, ರಾಜ್ಯದ ಮೂಲೆ ಮೂಲೆಯಲ್ಲೂ ಹೊಸ ವರ್ಷಾಚರಣೆ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆಗೆ ಸಿದ್ಧತೆ ಮಾಡಿಕೊಂಡ ಶಂಕೆ ಹಿನ್ನೆಲೆ, ಐವರು ಲಾಕ್ ಆಗಿದ್ದಾರೆ. ಇನ್ನು, ಚಿಕ್ಕಬಳ್ಳಾಪುರದ ಸ್ಕಂದಗಿರಿ, ಕೈವಾರ ಬೆಟ್ಟಗಳ ಚಾರಣಕ್ಕೂ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




