ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರಗೆಡವಲು ಪ್ರಯತ್ನಿಸಿದ್ದಾರೆ. ಎರಡು ಕ್ಯಾಮೆರಾಗಳನ್ನಿಟ್ಟು ಸತತ ನಾಲ್ಕು ಗಂಟೆಗಳ ಕಾಲ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಿಸಲಾಯಿತಾದರೂ ಅವರಿಂದ ಬಹುತೇಕ ಪ್ರಶ್ನೆಗಳಿಗೆ ‘ಗೊತ್ತಿಲ್ಲ’ ಎಂಬ ಉತ್ತರವೇ ಲಭ್ಯವಾಗಿದೆ. ಈ ವೇಳೆ ಯುವತಿ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಬಗ್ಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿದಾಗ ಅದಕ್ಕೂ ಯಥವಾತ್ತಾಗಿ ನನಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ, ಅದನ್ನು ಅಷ್ಟಕ್ಕೇ ಬಿಡದ ಅಧಿಕಾರಿಗಳು ಸುಮಾರು 20 ನಿಮಿಷ ಅವಧಿಯ ಕರೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ರಮೆಶ್ ಜಾರಕಿಹೊಳಿ ಮುಂದಿಟ್ಟು ಶಾಕ್ ನೀಡಿದ್ದಾರೆ ಎನ್ನಲಾಗಿದೆ.
ಎಸ್ಐಟಿ ಅಧಿಕಾರಿಗಳು ಮುಂದಿಟ್ಟ ದಾಖಲೆಗಳನ್ನು ಕಂಡು ಬೆಚ್ಚಿಬಿದ್ದ ರಮೇಶ್ ಜಾರಕಿಹೊಳಿ, ಆಕೆ ಯಾರು ಎಂಬುದೇ ಗೊತ್ತಿಲ್ಲ. ಮೊಬೈಲ್ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಅದರಲ್ಲಿ ನಾನು ಅನಕ್ಷರಸ್ಥ. ಯುವತಿ ಬಗ್ಗೆ ಏನೇನೂ ಗೊತ್ತಿಲ್ಲ, ನಾನು ಆಕೆಯನ್ನು ಯಾವತ್ತೂ ಭೇಟಿಯಾಗಿಲ್ಲ ಎಂದು ಹೇಳುತ್ತಾ ಫ್ಲ್ಯಾಟ್ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಆಗಿದೆ ಮತ್ತು ಇದರ ಹಿಂದೆ ಮಹಾನಾಯಕ ಇದ್ದಾನೆ ಎಂದು ಉತ್ತರ ಕೊಟ್ಟಿದ್ದಾರೆ.
ಇದೇ ವಿಷಯವನ್ನು ಇಟ್ಟುಕೊಂಡ ಎಸ್ಐಟಿ ಮಹಾನಾಯಕ ಯಾರೆಂದು ಹೇಳಿ ಎಂದಾಗ ಮತ್ತೆ ತನ್ನ ಮಾಮೂಲಿ ವರಸೆ ತೆಗೆದ ರಮೇಶ್ ಜಾರಕಿಹೊಳಿ, ಆತ ಯಾರು ಎಂಬುದನ್ನು ನೀವೇ ತನಿಖೆ ಮಾಡಿ ಎಂದು ಅಧಿಕಾರಿಗಳಿಗೇ ತಿರುಗುಬಾಣ ಬಿಟ್ಟಿದ್ದಾರೆ. ಸಿಡಿ ನಕಲಿ ಎನ್ನುವುದಕ್ಕೆ ದಾಖಲೆ ಕೊಡಿ ಎಂದಾಗಲೂ ಆರೋಪದ ಬಗ್ಗೆ ನೀವೇ ತನಿಖೆ ಮಾಡಿ ಎಂದಿದ್ದಾರೆ. ಅಂತೆಯೇ ದೃಶ್ಯದಲ್ಲಿರುವ ಫ್ಲ್ಯಾಟ್ ಕುರಿತು ವಿಚಾರಿಸಿದ ಅಧಿಕಾರಿಗಳು, ಅದು ನಿಮ್ಮ ಆಪ್ತರ ಫ್ಲ್ಯಾಟ್ ಅಲ್ಲವೇ ಎಂದಾಗ ಅದು ಯಾರ ಮನೆ, ಏನು ಅನ್ನೊದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಸತತ 4 ಗಂಟೆಯ ವಿಚಾರಣೆಯಲ್ಲಿ ಒಟ್ಟು 56 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಸ್ಐಟಿ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಎಸಿಪಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಸಲಾಗಿದೆ. ವೈಯಕ್ತಿಕ ವಿಷಯಗಳಿಂದ ಆರಂಭವಾದ ವಿಚಾರಣೆಯಲ್ಲಿ ರಮೇಶ್ ಜಾರಕಿಹೊಳಿ ಜನ್ಮಸ್ಥಳ, ವಿದ್ಯಾಭ್ಯಾಸ, ಜೀವನದ ಪ್ರಮುಖ ವಿಚಾರಗಳಿಂದ ಹಿಡಿದು ಹಂತಹಂತವಾಗಿ ಮಾಹಿತಿ ಸಂಗ್ರಹಿಸಲಾಗಿದೆ.
Published On - 9:51 am, Sat, 20 March 21