ಕುಕ್ಕೆಯಲ್ಲಿ ಶೈವ-ವೈಷ್ಣವ ಪೂಜಾ ವಿವಾದ: ಇದು ಹಿಂದೂ ಏಕತೆಯ ವಿಚಾರವೆಂದ ಹಿತರಕ್ಷಣಾ ವೇದಿಕೆ..!
ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಶೈವಾಂಶ ದೇಗುಲವಾಗಿದ್ದರೂ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನ ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ದಕ್ಷಿಣ ಕನ್ನಡ: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದ ಶೈವ-ವೈಷ್ಣವ ಪೂಜಾ ವಿವಾದ ಬಗೆಹರಿಯುವ ಲಕ್ಷಣಕಾಣ್ತಿಲ್ಲ. ದೇಗುಲದಲ್ಲಿ ನಡೆಯುತ್ತಿರುವ ಪೂಜಾ ಪದ್ಧತಿಗಳಲ್ಲೇ ನ್ಯೂನತೆಗಳಿದೆ ಎಂದು ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಈ ನಡುವೆ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕೂಡ ಮಾಡಲಾಗಿದೆ. ದಕ್ಷಿಣ ಕನ್ನಡದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೂಜಾ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕೆಲವು ದಿನಗಳ ಹಿಂದೆ ದೇಗುಲದಲ್ಲಿ ಶಿವರಾತ್ರಿ ಆಚರಣೆ ಮಾಡುವ ವಿಚಾರದಲ್ಲಿ ನಡೆದ ಜಟಾಪಟಿ ಈಗ ಮತ್ತೊಂದು ಹಂತ ತಲುಪಿದೆ. ದೇವಸ್ಥಾನದಲ್ಲಿ ನಡೆವ ದೈನಂದಿನ ಪೂಜೆಯಲ್ಲೇ ನ್ಯೂನತೆಗಳಿವೆ ಎಂದು ಹೇಳುವಷ್ಟರ ಮಟ್ಟಿಗೆ ವಿವಾದ ದೊಡ್ಡದಾಗಿದೆ.
ಇದು ಹಿಂದೂ ಏಕತೆಯ ವಿಚಾರವೆಂದ ಹಿತರಕ್ಷಣಾ ವೇದಿಕೆ..! ಹೌದು ಕುಕ್ಕೆ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಶೈವಾಂಶ ದೇಗುಲವಾಗಿದ್ದರೂ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನ ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಮೂಲ ದೇವರಿಗೆ ಪೂಜೆ ಮಾಡದೇ ವಿಷ್ಣುವಿಗೆ ಪೂಜೆ ಮಾಡುತ್ತಾರೆ ಎಂದು ಆರೋಪ ಮಾಡಲಾಗಿದೆ. ಇದರ ಜೊತೆ ಅಷ್ಟಮಂಗಲ ಪೂಜೆಯಲ್ಲೂ ನ್ಯೂನತೆಗಳು ಆಗುತ್ತಿವೆ ಎಂದು ವೇದಿಕೆ ಹೇಳಿದೆ.
ದಿಟ್ಟಂ ಪ್ರಕಾರವೇ ಪೂಜೆ ನಡೆಯಬೇಕು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾ ದೇವರುಗಳಿಗೆ ಅದೇ ರೀತಿ ಪೂಜೆ ಸಲ್ಲಿಸಬೇಕಾಗಿದೆ. ಹೀಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1980ರಲ್ಲಿ ಆಗಿರುವ ದಿಟ್ಟಂ ಪ್ರಕಾರವೇ ಪೂಜೆ ನಡೆಯಬೇಕು ಎಂಬುದು ದೇವಸ್ಥಾನ ಹಿತರಕ್ಷಣಾ ವೇದಿಕೆ ಒತ್ತಾಯ. ಆದ್ರೆ ಇಲ್ಲಿ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ, ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ ಎಂಬುದು ಆರೋಪ. ಈ ನಡುವೆ ಕುಕ್ಕೆಸುಬ್ರಹ್ಮಣ್ಯ ದೇವರ ಒಳಗಿರುವ ವಿಷ್ಣುವಿಗೆ ಪೂಜೆ ಮಾಡುತ್ತಾರೆ. ನೈವೇದ್ಯವನ್ನ ವಿಷ್ಣುವಿಗೆ ನೀಡುತ್ತಾರೆ, ಶಿವ ದೇವರ ನೈವೇದ್ಯವನ್ನ ಸಹಿತ ಅರ್ಚಕರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ವಿವಾದದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ಭಕ್ತರಲ್ಲಿ ಗೊಂದಲ ಮತ್ತು ನೋವಿಗೆ ಕಾರಣವಾಗಿದೆ. ಹೀಗಾಗಿ ಮುಜರಾಯಿ ಇಲಾಖೆ ಶೀಘ್ರದಲ್ಲಿ ಅಧಿಕಾರಿಗಳು, ಭಕ್ತರು, ಅರ್ಚಕರು ಹಾಗೂ ಧಾರ್ಮಿಕ ಪರಿಷತ್ ಜತೆ ಸಭೆ ನಡೆಸಿ ಗೊಂದಲ ನಿವಾರಿಸಬೇಕಿದೆ. ಈ ಮೂಲಕ ದೇವರ ವಿಚಾರದಲ್ಲಿ ಯಾವುದೇ ಭೇದಗಳಿಲ್ಲ ಎಂಬುದನ್ನು ಸಮಾಜಕ್ಕೆ ಸ್ಪಷ್ಟಪಡಿಸಬೇಕಾಗಿದೆ.
ಇದನ್ನೂ ಓದಿ:Kukke Subrahmanya temple | ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆಗೆ ಒಮ್ಮತದ ಒಪ್ಪಿಗೆ