ಸಿದ್ದರಾಮಯ್ಯ ವಿರುದ್ಧ ಮತ್ತೆ ಭುಗಿಲೆದ್ದ ಅಸಮಾಧಾನ.. ತವರು ಜಿಲ್ಲೆಯಲ್ಲಿ ತನ್ವೀರ್ ಸೇಠ್ ಬೆಂಬಲಿಗರ ಸಿಟ್ಟು..!
ಪರಮೇಶ್ವರ್‌ಗೆ ಸಿಎಂ ಪಟ್ಟ ತಪ್ಪಿಸಿದ್ರು. ಶ್ರೀನಿವಾಸ್ ಪ್ರಸಾದ್ ಪಕ್ಷದಿಂದ ಆಚೆ ಹೋಗುವಂತೆ ಮಾಡಿದ್ರು. ಮಲ್ಲಿಕಾರ್ಜುನ ಖರ್ಗೆ ಅನ್ಯಾಯ ಮಾಡಿದ್ರು.
ಮೈಸೂರು: ಅದ್ಯಾಕೋ ಮೈಸೂರು ಮೇಯರ್ ಆಯ್ಕೆ ನಂತ್ರ ಕಾಂಗ್ರೆಸ್‌ನಲ್ಲಿ ಆರಂಭವಾದ ಒಳಬೇಗುದಿ ಆರುವ ಲಕ್ಷಣಗಳೇ ಕಾಣುತ್ತಿಲ್ಲ. ಎಲ್ಲವೂ ಸರಿ ಆಯ್ತು ಅನ್ನೋ ವೇಳೆಗೆ ತನ್ವೀರ್ ಬೆಂಬಲಿಗರ ಅಮಾನತು ಮತ್ತೆ ಮೈಸೂರು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮೈಸೂರು ಮೇಯರ್ ಸ್ಥಾನ ಬಿಟ್ಟುಕೊಟ್ಟ ನಂತ್ರ ಆದ ಬೆಳವಣಿಗೆಯಲ್ಲಿ ತನ್ವೀರ್ ಸೇಠ್ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದಕ್ಕೆ ತುಪ್ಪ ಸುರಿಯುವಂತೆ ಸಿದ್ದು ಆಪ್ತ ಶಾಸಕ ರಮೇಶ್‌ಕುಮಾರ್ ಎನ್. ಆರ್ ಕ್ಷೇತ್ರದ ಶಾಸಕ ತನ್ವೀರ್ ನೋಟಿಸ್ ಕೊಡ್ರಿ ಅಂತ ಹೇಳಿದ್ರು. ಇದರಿಂದ ಕೆಂಡಾಮಂಡಲರಾಗಿದ್ದ ತನ್ವೀರ್ ಅಭಿಮಾನಿಗಳು ಸಿದ್ದು ವಿರುದ್ಧ ಘೋಷಣೆಗಳನ್ನ ಕೂಗಿ ಆಕ್ರೋಶ ಹೊರಹಾಕಿದ್ರು.
ತನ್ವೀರ್ ಸೇಠ್ ಆಪ್ತರಾದ ಮೂವರನ್ನ ಅಮಾನತು.. ಇದೀಗ ಸಿದ್ದು ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಶಾಸಕ ತನ್ವೀರ್ ಸೇಠ್ ಆಪ್ತರಾದ ಮೂವರನ್ನ ಅಮಾನತು ಮಾಡಲಾಗಿದೆ. ಸಿದ್ದು ವಿರುದ್ಧ ಘೋಷಣೆ ಕೂಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಮೈಸೂರು ನಗರ ಡಿಸಿಸಿ ಉಪಾಧ್ಯಕ್ಷ ಅನ್ವರ್ ಪಾಷಾ ಮತ್ತು ಕೆಪಿಸಿಸಿ ಸದಸ್ಯ ಪಿ. ರಾಜುರನ್ನ ಅಮಾನತು ಮಾಡಲಾಗಿದೆ. ಇದು ತನ್ವೀರ್ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪರಮೇಶ್ವರ್‌ಗೆ ಸಿಎಂ ಪಟ್ಟ ತಪ್ಪಿಸಿದ್ರು.. ತನ್ವೀರ್ ಸೇಠ್ ಅವ್ರನ್ನ ರಾಜಕೀಯವಾಗಿ ಟಾರ್ಗೆಟ್ ಮಾಡಿ ಈ ರೀತಿ ಮಾಡಲಾಗಿದೆ. ಇದಕ್ಕೆ ರಾಜ್ಯದ ನಾಯಕರ ಹುನ್ನಾರವೂ ಇದೆ ಅಂತ ಶಾಹಿದ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಅಮಾನತುಗೊಂಡಿರೋ ಪಿ. ರಾಜು ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಸಿದ್ದರಾಮಯ್ಯ ಪರಮೇಶ್ವರ್‌ಗೆ ತೊಂದರೆ ನೀಡಿ ಮೋಸ ಮಾಡಿದ್ರು. ಅಹಿಂದ ಹೆಸರಿನಲ್ಲಿ ದಲಿತ ನಾಯಕರ ಕಡೆಗಣನೆ ಮಾಡಿದ್ರು.
ಪರಮೇಶ್ವರ್‌ಗೆ ಸಿಎಂ ಪಟ್ಟ ತಪ್ಪಿಸಿದ್ರು. ಶ್ರೀನಿವಾಸ್ ಪ್ರಸಾದ್ ಪಕ್ಷದಿಂದ ಆಚೆ ಹೋಗುವಂತೆ ಮಾಡಿದ್ರು. ಮಲ್ಲಿಕಾರ್ಜುನ ಖರ್ಗೆ ಅನ್ಯಾಯ ಮಾಡಿದ್ರು. ಅವ್ರ ಪರಮಾಪ್ತ ಹೆಚ್.ಸಿ ಮಹದೇವಪ್ಪ ಅವರನ್ನ ಡಿಸಿಎಂ ಮಾಡಬಹುದಿತ್ತು. ಆದ್ರೂ ಮಾಡಲಿಲ್ಲ. ಬದಲಾಗಿ ಜಾರ್ಜ್ ಫರ್ನಾಂಡಿಸ್ ಪರ ಸಿದ್ದು ನಿಂತಿದ್ದರು. ಆದ್ರೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಯಾಕೆ ಅಂತ ಪ್ರಶ್ನಿಸಿದ್ರು.
ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.. ಇನ್ನು ಮೂವರನ್ನ ಅಮಾನತು ಮಾಡಿರುವುದು ಎನ್.ಆರ್ ಕ್ಷೇತ್ರದ ಕೈ ಕಾರ್ಯಕರ್ತರು ಹಾಗೂ ತನ್ವೀರ್ ಅಭಿಮಾನಿಗಳನ್ನ ಕೆರಳುವಂತೆ ಮಾಡಿದೆ. ಹೀಗಾಗಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್‌ನ ಎಲ್ಲಾ 9 ವಾರ್ಡ್ ಅಧ್ಯಕ್ಷರು ಮತ್ತು 141 ಬೂತ್ ಅಧ್ಯಕ್ಷರುಗಳು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಹೀಗಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನದ ಜ್ವಾಲಾಗ್ನಿ ಈಗ ಮತ್ತೆ ಪ್ರಜ್ವಲಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತೆ ಯಾವ ರೀತಿ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಕಾಲವೇ ನಿರ್ಧರಿಸಲಿದೆ.