ಹಾಸನದಲ್ಲಿ ಎಸ್​ಐಟಿ ದಾಳಿ: ಒಕ್ಕಲಿಗ ಜನಾಂಗ ತಿರುಗಿ ಬೀಳುತ್ತದೆಂಬ ಭಯದಿಂದ ಕ್ರಮವೆಂದ ಆರ್ ಅಶೋಕ್

| Updated By: ಗಣಪತಿ ಶರ್ಮ

Updated on: May 15, 2024 | 12:35 PM

ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಹಾಸನದ ವಿವಿಧೆಡೆ ದಾಳಿ ನಡೆಸಿದ್ದ ಎಸ್​ಐಟಿ ಅಧಿಕಾರಿಗಳು ಇಂದು ಮುಂಜಾನೆ 3.30ರವರೆಗೂ ಶೋಧಕಾರ್ಯ ನಡೆಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್ ಅಶೋಕ್, ಕಾಂಗ್ರೆಸ್ ಸರ್ಕಾರಕ್ಕೆ ಒಕ್ಕಲಿಗರ ಭಯ ಶುರುವಾಗಿದೆ ಎಂದಿದ್ದಾರೆ. ಅಶೋಕ್ ಯಾಕೆ ಹೀಗೆ ಹೇಳಿದರು? ಏನೆಲ್ಲ ಹೇಳಿದರು? ತಿಳಿಯಲು ಮುಂದೆ ಓದಿ.

ಹಾಸನದಲ್ಲಿ ಎಸ್​ಐಟಿ ದಾಳಿ: ಒಕ್ಕಲಿಗ ಜನಾಂಗ ತಿರುಗಿ ಬೀಳುತ್ತದೆಂಬ ಭಯದಿಂದ ಕ್ರಮವೆಂದ ಆರ್ ಅಶೋಕ್
ಆರ್ ಅಶೋಕ್
Follow us on

ಬೆಂಗಳೂರು, ಮೇ 15: ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಹಾಗೂ ಪೆನ್​ಡ್ರೈವ್ ಪ್ರಕರಣದಲ್ಲಿ ಹಾಸನದಲ್ಲಿ ಎಸ್​ಐಟಿ ದಾಳಿ (SIT Raid) ನಡೆಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್​ (R Ashok) ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​​ಗೆ ಒಕ್ಕಲಿಗ ಜನಾಂಗ ತಿರುಗಿ ಬೀಳುತ್ತದೆಂಬ ಭಯ ಶುರುವಾಗಿದೆ. ಕಾಂಗ್ರೆಸ್ಸಿಗರಿಗೆ ಇರಿಸು ಮುರಿಸು ಆಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಪ್ರಜ್ವಲ್ ಮಾಜಿ ಕಾರು ಚಾಲಕನಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಏಕೆ ಬಂಧಿಸಿಲ್ಲ? ಅವರಿಗೆ ಯಾಱರು ಬೇಕೋ ಅವರ ಮೇಲೆ ಆರೋಪ ಮಾಡುತ್ತಾರೆ. ಯಾರನ್ನು ವರ್ಗಾವಣೆ ಮಾಡಬೇಕೋ ಅದಕ್ಕೆ ಎಸ್​ಐಟಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಎಸ್​ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ತಿಮಿಂಗಿಲ ಇದೆ ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ತಿಮಿಂಗಿಲ ಬಡಿದು ತಿಂದುಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಡಿದು ತಿನ್ನುವುದನ್ನು ದೇವೇಗೌಡರ ಕುಟುಂಬ ತೀರ್ಮಾನ ಮಾಡಬೇಕು. ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ಕೊಡಬೇಕಿತ್ತಾ ಎಂದು ಒಕ್ಕಲಿಗ ಜನಾಂಗದವರು ಮಾತಾಡುತ್ತಿದ್ದಾರೆ. ಎಸ್​​​ಐಟಿ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಹಾಗಾದರೆ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್​​ಗಳಲ್ಲಿ ವೀಡಿಯೋ ಇಲ್ಲವೇ? ಅವರನ್ನು ಎಷ್ಟು ಜನರನ್ನು ಬಂಧಿಸಿದ್ದೀರರಿ? ಇದು ಕಾಂಗ್ರೆಸ್​​ನವರ ಮಾಸ್ಟರ್ ಪ್ಲಾನ್. ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಟ್ಟದಲ್ಲಿ ಪ್ರಕರಣದ ಮಾನಿಟರ್ ಆಗುತ್ತಿದೆ ಎಂದು ಅವರು ಹೇಳಿದರು.

ದೇವೇಗೌಡರ ಕುಟುಂಬಕ್ಕೆ ಹೀಗಾಗಬಾರದಿತ್ತು, ಅನುಕಂಪ ಇದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಪ್ರಾಮಾಣಿಕತೆಯಿಂದ ಹೇಳಿದ್ದಲ್ಲ, ಕಿಂಡಲ್ ಮಾಡಲು ಹೇಳಿದ್ದಾರೆ. ರೇವಣ್ಣ ಜೈಲಿಗೆ ಹೋದಾಗ ಹೆಚ್ಚು ಖುಷಿ ಪಟ್ಟವರು ಕಾಂಗ್ರೆಸ್​​​ನವರೇ. ತಿಮಿಂಗಿಲ ಸಮುದ್ರದಲ್ಲಿ ಇದ್ದರೂ ಆಮ್ಲಜನಕಕ್ಕಾಗಿ ಒಂದು ಸಲ ಮೇಲೆ ಬರಲೇಬೇಕಲ್ವಾ? ಆಗ ತಿಮಿಂಗಿಲ ಕಾಂಗ್ರೆಸ್ಸೇ ಅಥವಾ ಜೆಡಿಎಸ್ ಪಕ್ಷೇ ಎಂಬುದು ಗೊತ್ತಾಗಲಿದೆ ಎಂದು ಅಶೋಕ್ ಹೇಳಿದರು.

ಹಾಸನದಲ್ಲಿ ಮುಂಜಾನೆ ವರೆಗೂ ಶೋಧನ ನಡೆಸಿದ್ದ ಎಸ್​ಐಟಿ

ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಹಾಸನದ ವಿವಿಧೆಡೆ ದಾಳಿ ನಡೆಸಿದ್ದ ಎಸ್​ಐಟಿ ಅಧಿಕಾರಿಗಳು ಇಂದು ಮುಂಜಾನೆ 3.30ರವರೆಗೂ ಶೋಧಕಾರ್ಯ ನಡೆಸಿದ್ದರು. ಹಾಸನ, ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ ಸೇರಿದಂತೆ ಹಾಸನ ಜಿಲ್ಲೆಯ 18 ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ದಾಳಿ ನಡೆಸಿದ್ದರು.

ಬಿಜೆಪಿ ನಾಯಕ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ಮನೆ ಮೇಲೂ ದಾಳಿ ಮಾಡಿದ್ದರು. ಕ್ವಾಲಿಟಿ ಬಾರ್ ಶರತ್​ ಅವರ ಬೆಂಗಳೂರು ಮನೆ ಮೇಲೂ ದಾಳಿ ನಡೆಸಿ ಶರತ್ ಫೋನ್​ ಜಪ್ತಿ ಮಾಡಿದ್ದರು. ಶರತ್ ಮನೆಯಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪಂಚನಾಮೆಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ವಿಮಾನ ಟಿಕೆಟ್ ರದ್ದು, ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ ನಡೆ

ಇನ್ನುಳಿದ ಕಡೆಗಳಲ್ಲಿ ಎಸ್​ಐಟಿ ಅಧಿಕಾರಿಗಳು ಹಲವು ಮಹತ್ವದ ಸಾಕ್ಷ್ಯ, ದಾಖಲೆ ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ