ಕಚೇರಿ, ಆವರಣದಲ್ಲಿ ಧೂಮಪಾನ-ತಂಬಾಕು ಸೇವನೆ ನಿಷೇಧ, ಸಿಬ್ಬಂದಿಗೆ ಸರ್ಕಾರ ಎಚ್ಚರಿಕೆ!

| Updated By: ರಮೇಶ್ ಬಿ. ಜವಳಗೇರಾ

Updated on: Nov 07, 2024 | 7:04 PM

ಸರ್ಕಾರಿ ಕಚೇರಿಗಳು ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ, ತಂಬಾಕು ಸೇವನೆ ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸೂಚನೆ ಉಲ್ಲಂಘಿಸಿದರೆ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಕಚೇರಿ, ಆವರಣದಲ್ಲಿ ಧೂಮಪಾನ-ತಂಬಾಕು ಸೇವನೆ ನಿಷೇಧ, ಸಿಬ್ಬಂದಿಗೆ ಸರ್ಕಾರ ಎಚ್ಚರಿಕೆ!
Follow us on

ಬೆಂಗಳೂರು, (ನವೆಂಬರ್ 07): ಸರ್ಕಾರಿ ಕಚೇರಿ ಹಾಗೂ ಕಚೇರಿ ಆವರಣಗಳಲ್ಲಿ ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನ ಗಳ ಸೇವನೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧೂಮಪಾನ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ. ಶಾಸನಾತ್ಮಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !

ಈ ಹಿನ್ನಲೆಯಲ್ಲಿ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಗಳನ್ನು ರಕ್ಷಿಸುವ ಉದ್ದೇಶದಿಂದ ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಸೂಚನೆಗಳನ್ನು ಉಲ್ಲಂಘಿಸಿ ಯಾವುದೇ ಸರ್ಕಾರಿ ನೌಕರ ಕಚೇರಿಯಲ್ಲಿ ಅಥವಾ ಕಚೇರಿಯ ಆವರಣದಲ್ಲಿ ಧೂಮಪಾನ ಮಾಡುವುದು ಮತ್ತು ಯಾವುದೇ ತಂಬಾಕು ಉತ್ಪನ್ನಗಳನ್ನು (ಗುಟ್ಕಾ, ಪಾನ್ ಮಸಾಲ, ಹೊಗೆಸೊಪ್ಪು ಇತ್ಯಾದಿ) ಸೇವಿಸುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Published On - 7:04 pm, Thu, 7 November 24