ಸಿಎಂ ಬೆನ್ನಲ್ಲೇ ಸಚಿವ ಎಂಬಿ ಪಾಟೀಲ್‌ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ಪ್ರಕರಣ?

|

Updated on: Aug 23, 2024 | 5:04 PM

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತು ಕೋರ್ಟ್​ನಲ್ಲಿ ಖಾಸಗಿ ದೂರುಗಳು ದಾಖಲಾಗಿವೆ. ಅಲ್ಲದೇ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಹಿರಿಯ ಸಚಿವ ಎಂಬಿ ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಹಾಗಾದ್ರೆ, ಎಂಬಿ ಪಾಟೀಲ್ ವಿರುದ್ಧ ಕೇಳಿಬಂದ ಆರೋಪವೇನು? ಇಲ್ಲಿದೆ ವಿವರ.

ಸಿಎಂ ಬೆನ್ನಲ್ಲೇ ಸಚಿವ ಎಂಬಿ ಪಾಟೀಲ್‌ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ಪ್ರಕರಣ?
ಸಚಿವ ಎಂಬಿ ಪಾಟೀಲ್
Follow us on

ಬೆಂಗಳೂರು, (ಆಗಸ್ಟ್ 23): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಸಂಪುಟದ ಬೃಹತ್‌ ಕೈಗಾರಿಕಾ ಸಚಿವ ಎಂಬಿ ಪಾಟೀಲ್​ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಭೂಮಿಯನ್ನು ಎಂಬಿ ಪಾಟೀಲರು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಆರೋಪಿಸಿದ್ದು, ಈ ಸಂಬಂಧ ಸಚಿವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಇಂದು (ಆಗಸ್ಟ್ 23) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಆರೋಪ ಏನು?

ಎಂಬಿ ಪಾಟೀಲ್‌ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಭೂಮಿಯನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. ನಿಯಮದ ಪ್ರಕಾರ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಇವರು ಕೈಗಾರಿಕೆ ನಡೆಸದ ಕಂಪನಿಗಳಿಗೆ ಹಂಚಿಕೆ ಮಾಡಿದ್ದಾರೆ. ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ‌ ಹಂಚಿಕೆಯಲ್ಲಿ ಅಕ್ರಮ‌ ಎಸಗಲಾಗಿದೆ. ಕಾನೂನು ಬಾಹಿರವಾಗಿ ನಿಯಮಗಳನ್ನು ಗಾಳಿಗೆ ತೂರಿ ನಿವೇಶನ ಹಂಚಿಕೆ ಮಾಡಲಾಗಿದೆ . ಇವರ ಕೆಲಸಗಳಿಗೆ ಕೆಲ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. ಈ ಅಕ್ರಮ ಹಂಚಿಕೆಯಿಂದ ಕೆಐಎಡಿಬಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: 1494 ಕೋಟಿ ರೂ ಹಣ ದುರುಪಯೋಗ ಆರೋಪ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ದೂರು ನೀಡಿದ ಬಳಿಕ ದಿನೇಶ್ ಕಲ್ಲಳ್ಳಿ ಹೇಳಿದ್ದಿಷ್ಟು

ಈ ಸಂಬಂಧ ವಿಧಾನಸೌಧದಲ್ಲಿ ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಪ್ರತಿಕ್ರಿಯಿಸಿದ್ದು, ಸಚಿವ ಎಂ ಬಿ ಪಾಟೀಲ್ ಅವರ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ ಸುಮಾರು ನೂರು ಎಕರೆಗೂ ಹೆಚ್ಚು ಮೂಲೆ ನಿವೇಶಗಳನ್ನ ಸಾಮಾನ್ಯ ಹಂಚಿಕೆ ದರದಲ್ಲಿ ಹಂಚಿಕೆ ಮಾಡಿದ್ದಾರೆ. ಇದೇ ನಿವೇಶಗಳನ್ನ ಹರಾಜು ಪ್ರಕ್ರಿಯೆಯಲ್ಲಿ 1/3 ದೂರದಲ್ಲಿ ಹಂಚಿಕೆ ಮಾಡುತ್ತಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಕೊಟ್ಟಿದ್ದೆ.ಆಅಲ್ಲದೇ ನಾನು ರಾಹುಲ್ ಗಾಂಧಿಗೂ ಸಹ ದೂರು ಕೊಟ್ಟಿದ್ದೆ. ಅದ್ರೆ ಯಾರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಎಂ ಬಿ ಪಾಟೀಲ್ ಅವರು ಅಕ್ರಮವಾಗಿ ಮೂಲೆ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪಾಟೀಲ್ ಅವರ ಕೈವಾಡ ಹೆಚ್ಚಿದೆ. ಹೀಗಾಗಿ ರಾಜ್ಯಪಾಲರನ್ನ ಭೇಟಿಯಾಗಿ ಎಂಬಿ ಪಾಟೀಲ್ ವಿರುದ್ದ ದೂರು ಕೊಟ್ಟದ್ದು, ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೇನೆ. ಕಾನೂನು ಬಾಹಿರವಾಗಿ ಯಾವ್ಯಾವ ಕಂಪನಿಗಳಿಗೆ ಮೂಲೆ ನಿವೇಶನ ಕೊಟ್ಟಿದ್ದಾರೆ ಎಂದು ದಾಖಲೆ ಸಮೇತ ಎಲ್ಲಾ ವಿಚಾರವೂ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮೂಲೆ ನಿವೇಶನಗಳನ್ನ ಹರಾಜು ಮಾಡಿ ಹಂಚಿಕೆ ಮಾಡಬೇಕು. ಆದ್ರೆ ಇವರು ಸಾಮಾನ್ಯ ದರದಲ್ಲಿ ಈ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರ ಎರಡರಲ್ಲಿ ಸಾಕಷ್ಟು ವ್ಯತ್ಯಾಸ ಇದೆ/ ಆದ್ರೆ ಹೀಗೆ ಹಂಚಿಕೆ ಮಾಡಿರೋದ್ರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ ಇದರ ಹಿಂದೆ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಸಂಶಯ ಇದ್ದು, ತನಿಖೆ ಮಾಡಿದರೆ ಎಲ್ಲವೂ ಹೊರಬರಲಿದೆ ಎನ್ನುವುದು ನನ್ನ ಒತ್ತಾಯ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.