1494 ಕೋಟಿ ರೂ ಹಣ ದುರುಪಯೋಗ ಆರೋಪ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ಮೈಸೂರ್ ಸೈಟ್, ಬೆಂಗಳೂರಲ್ಲಿ ಪ್ರಾಸಿಕ್ಯೂಷನ್ ಫೈಟ್, ಇದೇ ಜಟಾಪಟಿ ಈಗ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿದೆ. ಮುಡಾ ದಾಖಲೆಯೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ. ಇತ್ತ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ.
ಬೆಂಗಳೂರು, ಆಗಸ್ಟ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆಗೆ ಆದೇಶಿಸಿ ರಾಜ್ಯಪಾಲರು ಹೊರಡಿಸಿರೋ ಪ್ರಾಸಿಕ್ಯೂಷನ್ ಸರ್ಕಾರ ಮತ್ತು ಗವರ್ನರ್ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಎಂಗೆ, ಕೊಂಚ ರಿಲೀಫ್ ಸಿಕ್ಕಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ನಲ್ಲಿ ಬಾಕಿ ಉಳಿದಿರುವ 1494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಅರುಣ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
1494 ಕೋಟಿ ರೂ. ಹಣ ಎಲ್ಲಿದೆ, ರಾಜ್ಯ ಸರ್ಕಾರದ ಖಜಾನೆಯಲ್ಲೂ ಇಲ್ಲ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಬಿಜೆಪಿ ಸದಸ್ಯ ಅರುಣ್ ಹೇಳಿದ್ದಿಷ್ಟು
ವಿಧಾನಸೌಧದಲ್ಲಿ ವಿಧಾನಪರಿಷತ್ನ ಬಿಜೆಪಿ ಸದಸ್ಯ ಅರುಣ್ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. 2022-23ರ ಅವಧಿಯಲ್ಲಿ ನಮ್ಮ ಸರ್ಕಾರದ ಅಧಿಕಾರದಲ್ಲಿ ಇತ್ತು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ಗಳಲ್ಲಿ ಎಷ್ಟು ಹಣ ಬಳಕೆ ಆಗಿದೆ. ಉಳಿದ ಮೊತ್ತ ಯಾವುದಕ್ಕೆ ಉಪಯೋಗ ಮಾಡಿದ್ದೆ ಅಂತಾ ಪ್ರಶ್ನೆ ಮಾಡಿದ್ದೇನೆ. 1953 ಕೋಟಿ ರೂ. ಹಣ ಇತ್ತು, ಸಂಚಿತ ನಿಧಿಗೆ ಉಳಿದ ಹಣ ಹೋಗಬೇಕು. ಹಣ ಬಳಕೆ ಮಾಡಬೇಕೆಂದ್ರೆ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರು ಸಂವಿಧಾನಕ್ಕೆ ಧಕ್ಕೆಯಾಗುವಂತೆ ವರ್ತಿಸಿದರೆ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕಾಗುತ್ತದೆ: ತನ್ವೀರ್ ಸೇಟ್
ಪ್ರಾಸಿಕ್ಯೂಷನ್ ಸಮರ ನಿಲ್ಲಿಸದ ಸಿಎಂ, ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ರಾಜಕೀಯ ವಿರೋಧಿಗಳಿಗೆ ಪ್ರಾಸಿಕ್ಯೂಷನ್ ಬಲೆ ಹಾಕಿದ್ದರು. ಇದಾದ ನಂತರ ಶಾಸಕಾಂಗ ಸಭೆ ನಡೆಸಿ ಬೆಂಬಲ ಪಡೆದಿದ್ದರು. ರಾಜ್ಯಪಾಲರ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು, ರಾಷ್ಟ್ರಪತಿಗಳಿಗೆ ದೂರು ನೀಡುವ ಬಗ್ಗೆ ಸಲಹೆ ನೀಡಿದ್ದರು. ಅವಶ್ಯಕತೆ ಬಿದ್ದರೆ ಪರೇಡ್ ನಡೆಸೋದಾಗಿಯೂ ಚರ್ಚೆಸಿದ್ದರು. ಹೀಗೆ ಎಲ್ಲರ ಬೆಂಬಲ, ಎಲ್ಲರ ಅಭಿಪ್ರಾಯ ಪಡೆದ ಸಿಎಂ, ಇದೀಗ ದೆಹಲಿಗೆ ತೆರಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Fri, 23 August 24