ರಾಜ್ಯಪಾಲರು ಸಂವಿಧಾನಕ್ಕೆ ಧಕ್ಕೆಯಾಗುವಂತೆ ವರ್ತಿಸಿದರೆ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕಾಗುತ್ತದೆ: ತನ್ವೀರ್ ಸೇಟ್
ರಾಜ್ಯಪಾಲರ ಕಚೇರಿಯು ರಾಜಕೀಯ ಪಕ್ಷದ ಕಚೇರಿಯಾಗಿ ಮಾರ್ಪಟ್ಟಿರುವುದು ದುರದೃಷ್ಟಕರ ಮತ್ತು ಮುಡಾ ಪ್ರಕರಣದ ತನಿಖೆಗಾಗಿ ಸರ್ಕಾರ ಒಂದು ಆಯೋಗವನ್ನು ರಚಿಸಿದ್ದು ಅದು ತನಿಖೆಯನ್ನು ಪೂರ್ಣಗೊಳಿಸುವ ಮೊದಲೇ ಕೇವಲ ಊಹಾಪೋಹಗಳನ್ನು ಆಧರಿಸಿ ಚರ್ಚೆಗಳನ್ನು ಮಾಡೋದು ಸರಿಯಲ್ಲ ಎಂದು ತನ್ವೀರ್ ಸೇಟ್ ಹೇಳಿದರು.
ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಗಜೆಪಡೆಯನ್ನು ಅರಮನೆ ಅವರಣದಲ್ಲಿ ಸ್ವಾಗತಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಮೊದಲಿಗೆ ರಾಜಕಾರಣದ ಬಗ್ಗೆ ಮಾತು ಬೇಡ ಅಂದರಾದರೂ ಪತ್ರಕರ್ತರ ಆಗ್ರಹಕ್ಕೆ ಮಣಿದು ಸಿಎಂ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿಷಯದ ಮೇಲೆ ಮಾತಾಡಿದರು. ಅಸಲಿಗೆ ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮವೇ ಕಾನೂನು ಮತ್ತು ಸಂವಿಧಾನಬಾಹಿರ, ಯಾಕೆಂದರೆ ಸೆಕ್ಷನ್ 17 (ಎ) ಅಡಿಯಲ್ಲಿ ಖಾಸಗಿ ದೂರುಗಳಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಲು ಬರಲ್ಲ, ಲೋಕಾಯುಕ್ತ ಅಥವಾ ಎಸ್ಐಟಿಗಳು ಅನುಮತಿ ಕೋರಿದಾಗ ಮಾತ್ರ ಅವರು ಸ್ಪಂದಿಸಬೇಕು ಎಂದು ಸೇಟ್ ಹೇಳಿದರು. ಅದಕ್ಕೂ ಮಿಗಿಲಾಗಿ ಮುಖ್ಯಮಂತ್ರಿಯವರ ವಿರುದ್ಧ ಯಾವುದೇ ದಾಖಲೆ ಪುರಾವೆಗಳಿಲ್ಲ, ಪ್ರಕರಣದಲ್ಲಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿರುವ ಕುರುಹು ಇಲ್ಲ, ಹೀಗಾಗಿ ಸಂವಿಧಾನಕ್ಕೆ ಧಕ್ಕೆಯಾಗುವ ಹಾಗೆ ರಾಜ್ಯಪಾಲರು ನಡೆದುಕೊಂಡಿದ್ದರೆ ರಾಷ್ಟ್ರಪತಿಯವರ ಮಧ್ಯಪ್ರವೇಶ ಅನಿವಾರ್ಯ ಅಗುತ್ತದೆ ಎಂದು ತನ್ವೀರ್ ಸೇಟ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾದ ಮತ್ತಷ್ಟು ಕರ್ಮಕಾಂಡ ಬಯಲಿಗೆ, ಅಧಿಕಾರಗಳ ಕಳ್ಳಾಟದ ದಾಖಲೆ ಬಹಿರಂಗ