ಬೆಂಗಳೂರು, ಜೂನ್ 14: ನನ್ನ ಮುಗಿಸಲು ಸಹ ಕೆಲ ನಾಯಕ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಕೇಂದ್ರ ಸಚಿವರಾಗಿ ವಾರದ ಬಳಿಕ ಇಂದು ಬೆಂಗಳೂರಿಗೆ ಹೆಚ್ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೇಸ್ ಇದೆಯಾ ಅಂತಾ ಚೆಕ್ ಮಾಡ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿನ ಹೇಗೆ ಮುಗಿಸಿಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಮುಗಿಸಿದ್ದೇವೆ ಅಂತಾ ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿದ್ದು, ಸರ್ಕಾರದ 4 ತಿಂಗಳ ನಡುವಳಿಕೆ ಮೇಲೆ ಅನುಮಾನ ಪಡಬೇಕು. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಜನರಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಲ್ಕು ತಿಂಗಳ ನಂತರ ಈ ಕೇಸ್ ಕೆದಕಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವರಾಗಿ ಬೆಂಗಳೂರಿಗೆ ಬಂದ ಕುಮಾರಸ್ವಾಮಿ; ರಾಜ್ಯದ ಜನರಿಗೆ ಕೊಟ್ಟ ಭರವಸೆ ಏನು?
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಗೆ ಶಾಮಿಯಾನ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇತಿಹಾಸದಲ್ಲಿ ಈ ರೀತಿ ಘಟನೆ ಯಾವತ್ತೂ ನಾನು ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಸರಿಪಡಿಸಿಕೊಳ್ಳಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕೇಂದ್ರ ಸಚಿವನಾದ ಬಳಿಕ ನನ್ನ ಕರ್ಮ ಭೂಮಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ವಿಶೇಷವಾಗಿ ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನರೇಂದ್ರ ಮೋದಿ ನನಗೆ ಎರಡು ದೊಡ್ಡ ಖಾತೆಗಳನ್ನು ಕೊಟ್ಟಿದ್ದಾರೆ. 4 ದಿನ ದೆಹಲಿಯಲ್ಲಿ ಕೆಲಸ, ಇನ್ನೆರಡು ದಿನ ಕರ್ನಾಟಕದಲ್ಲಿ ಇರುತ್ತೇನೆ. ನಮ್ಮ ಸ್ವಯಂಕೃತ ಅಪರಾಧದಿಂದ 2 ಕ್ಷೇತ್ರಗಳಲ್ಲಿ ಸೋತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವರಾದ ಬಳಿಕ ಬೆಂಗಳೂರಿಗೆ ಬಂದ ಕುಮಾರಸ್ವಾಮಿಗೆ ಆ್ಯಪಲ್, ಮೂಸಂಬಿ ಹಾರ ಹಾಕಿ ಭರ್ಜರಿ ಸ್ವಾಗತ
ಹಾಸನ ಜಿಲ್ಲೆಯ ಜನತೆಗೆ ನಾನು ಎಂದಿಗೂ ದ್ರೋಹ ಮಾಡಲ್ಲ. ನನ್ನ ಕೊನೆಯುಸಿರು ಇರುವವರೆಗೂ ಹಾಸನ ಜನತೆ ಮರೆಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಸಚಿವರಾಗಿ ವಾರದ ಬಳಿಕ ಇಂದು ಬೆಂಗಳೂರಿಗೆ ಹೆಚ್ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಬೇರೆ ಬೇರೆ ಇದ್ದೇವೆ ಎಂದು ಟೀಕೆಮಾಡಿದ್ದರು. ನನಗೆ ನೋವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:04 pm, Fri, 14 June 24