4 ಲಕ್ಷ ಕಟ್ಟಿ ಕೊವಿಡ್ ಮೃತದೇಹ ಪಡೆಯಲು ಹೇಳಿದ ಆಸ್ಪತ್ರೆ ಸಿಬ್ಬಂದಿ: ಆಡಳಿತ ಮಂಡಳಿ ವಿರುದ್ಧ ಸಂಬಂಧಿಕರ ಅಕ್ರೋಶ‌

| Updated By: ganapathi bhat

Updated on: Jun 04, 2021 | 6:33 PM

ಅಂಚೆಟ್ಟಿ ಗ್ರಾಮದ ಶಿವಣ್ಣ ಎಂಬವರು ಕೊರೊನಾಗೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದರು. ಆದರೆ, ಮೃತರ ದೇಹ ಹಸ್ತಾಂತರಿಸಲು ಆಸ್ಪತ್ರೆಯ ಸಿಬ್ಬಂದಿ ಇನ್ನೂ 4 ಲಕ್ಷ ರೂಪಾಯಿ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.

4 ಲಕ್ಷ ಕಟ್ಟಿ ಕೊವಿಡ್ ಮೃತದೇಹ ಪಡೆಯಲು ಹೇಳಿದ ಆಸ್ಪತ್ರೆ ಸಿಬ್ಬಂದಿ: ಆಡಳಿತ ಮಂಡಳಿ ವಿರುದ್ಧ ಸಂಬಂಧಿಕರ ಅಕ್ರೋಶ‌
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊವಿಡ್‌ ಸೋಂಕಿಗೆ ಬಲಿಯಾದ ವ್ಯಕ್ತಿಯ ಮೃತದೇಹ ನೀಡಲು ಆಸ್ಪತ್ರೆ ಒಪ್ಪದ ಘಟನೆ ಬೆಂಗಳೂರಿನ ಚಂದಾಪುರದಲ್ಲಿ ನಡೆದಿದೆ. ಇಲ್ಲಿನ ಸ್ಪರ್ಶ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಮೃತದೇಹ ಹಸ್ತಾಂತರಿಸಲು ಇನ್ನೂ 4 ಲಕ್ಷ ರೂಪಾಯಿ ನೀಡಬೇಕು ಎಂದು ಪಟ್ಟುಹಿಡಿಯಲಾಗಿದೆ. ಈಗಾಗಲೇ 2 ಲಕ್ಷ 70 ಸಾವಿರ ಬಿಲ್ ಪಾವತಿಸಲಾಗಿದೆ. ಈಗ ಮತ್ತೆ 4 ಲಕ್ಷ ಪಾವತಿಸುವಂತೆ ಕೇಳಿದ್ದಾರೆ.

ತಮಿಳುನಾಡು ಅಂಚೆಟ್ಟಿ ಗ್ರಾಮದ ಶಿವಣ್ಣ ಎಂಬವರು ಕಳೆದ 15 ದಿನಗಳಿಂದ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ನಿನ್ನೆ ರಾತ್ರಿ ಸಾವನ್ನಪ್ಪಿದ್ದರು. ಆದರೆ, ಮೃತರ ದೇಹ ಹಸ್ತಾಂತರಿಸಲು ಆಸ್ಪತ್ರೆಯ ಸಿಬ್ಬಂದಿ ಇನ್ನೂ 4 ಲಕ್ಷ ರೂಪಾಯಿ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. 4 ಲಕ್ಷ ಕಟ್ಟಿ ಮೃತದೇಹ ಪಡೆಯಲು ಹೇಳಿದ್ದಾರೆ. ಸ್ಪರ್ಶ ಆಸ್ಪತ್ರೆಯ ಸಿಬ್ಬಂದಿ ನಡೆಗೆ ರೋಗಿ ಸಂಬಂಧಿಕರು ಸಿಟ್ಟಾಗಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸಂಬಂಧಿಕರು ಅಕ್ರೋಶ‌ ಹೊರಹಾಕಿದ್ದಾರೆ.

ಬಾಕಿ ಇರುವ ಚಿಕಿತ್ಸಾ ಶುಲ್ಕವನ್ನು ಪಾವತಿ ಮಾಡದ ಕಾರಣ ನೀಡಿ ಕೋವಿಡ್‌ ಸೋಂಕಿತರ ಮೃತ ದೇಹವನ್ನು ಹಸ್ತಾಂತರಿಸುವಲ್ಲಿ ಆಸ್ಪತ್ರೆಗಳು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ ಸರ್ಕಾರಿ ಆದೇಶವನ್ನು ಟ್ವೀಟ್ ಮೂಲಕ ಉಲ್ಲೇಖಿಸಿ ಇಂದು (ಮೇ 28) ಮತ್ತೆ ಎಚ್ಚರಿಕೆ ನೀಡಿದ್ದರು.

ಮೇ 24ರಂದು ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಅಶ್ವತ್ಥ್ ನಾರಾಯಣ ಆ ಸೂಚನೆಯನ್ನು ಇಂದು ಮತ್ತೆ ಹಂಚಿಕೊಂಡಿದ್ದರು. ಇಂತಹ ಪ್ರಕರಣಗಳು ವರದಿಯಾದಲ್ಲಿ ಅಂತಹ ಆಸ್ಪತ್ರೆಗಳ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದರು.

ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 24ರಂದು ಖಡಕ್ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗಾಗಿ ಗ್ಲೋಬಲ್ ಟೆಂಡರ್ ವಿಫಲ: ಒಗ್ಗೂಡಲು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ

ಕೊರೊನಾ ಆತಂಕ ಮುಗಿದರೂ ದೂರವಾಗಿಲ್ಲ ಸಂಕಷ್ಟ; ಬ್ಲ್ಯಾಕ್ ಫಂಗಸ್​ಗೆ ನಲುಗಿದ ಬೀದರ್

Published On - 6:27 pm, Fri, 4 June 21