ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ರಸ್ತೆ ಮಾರ್ಗದಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ

ಲಸಿಕೆ ಹಂಚಿಕೆಯಲ್ಲಿರುವ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ರಾಜ್ಯಪಾಲರಿಗೆ ದೂರು ನೀಡಿದರು. ಲಸಿಕೆ ಹಂಚಿಕೆಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಪತ್ರ ನೀಡುವ ಮೂಲಕ ಲಸಿಕೆ ನೀತಿ ಸರಿಪಡಿಸಲು ಕಾಂಗ್ರೆಸ್​ ಒತ್ತಾಯಿಸಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ರಸ್ತೆ ಮಾರ್ಗದಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ
ಲಸಿಕೆ ನೀತಿ ಸರಿಪಡಿಸುವಂತೆ ಕಾಂಗ್ರೆಸ್​ ನಾಯಕರು ಶುಕ್ರವಾರ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಮನವಿ ಸಲ್ಲಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 04, 2021 | 6:32 PM

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿದ್ದ ಹೆಲಿಕಾಪ್ಟರ್​ ಹವಾಮಾನ ವೈಪರಿತ್ಯದ ಕಾರಣ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶುಕ್ರವಾರ ನೆಲಮಂಗಲ ಸಮೀಪದ ಟಿ.ಬೇಗೂರು ಸಮೀಪ ನಡೆದಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಹಿಂದಿರುತ್ತಿದ್ದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಶಿವಕುಮಾರ್ ಅವರ ಜೊತೆಗಿದ್ದರು. ಮಳೆ ಹಿನ್ನೆಲೆಯಲ್ಲಿ ಎಚ್​ಎಎಲ್​ನಲ್ಲಿ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಮತಿ ನಿರಾಕರಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಕಾರ್ಖಾನೆಯಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿತು. ನಂತರ ರಸ್ತೆ ಮಾರ್ಗವಾಗಿ ಡಿಕೆಶಿ ಮತ್ತು ಇತರ ಮುಖಂಡರು ಬೆಂಗಳೂರು ತಲುಪಿದರು.

ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಇವರೆಲ್ಲರೂ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಆದರೆ ವಿಪರೀತ ಮಳೆಯ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅವರಿದ್ದ ಹೆಲಿಕಾಪ್ಟರ್ ಇಳಿಯಲು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಅನುಮತಿ ಲಭ್ಯವಾಗಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಇದ್ದ ಹೆಲಿಕಾಪ್ಟರ್ ನೆಲಮಂಗಲ ಬಳಿ ಸಂಜೆ 4 ಗಂಟೆ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಶಿವಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ರಾಜಭವನದತ್ತ ತೆರಳಿದರು.

ಕಾಂಗ್ರೆಸ್​ನಿಂದ ರಾಜ್ಯಪಾಲರ ಗಮನಕ್ಕೆ ಲಸಿಕೆ ಅವ್ಯವಸ್ಥೆ ಲಸಿಕೆ ಹಂಚಿಕೆಯಲ್ಲಿರುವ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ರಾಜ್ಯಪಾಲರಿಗೆ ದೂರು ನೀಡಿದರು. ಲಸಿಕೆ ಹಂಚಿಕೆಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಪತ್ರ ನೀಡುವ ಮೂಲಕ ಲಸಿಕೆ ನೀತಿ ಸರಿಪಡಿಸಲು ಕಾಂಗ್ರೆಸ್​ ಒತ್ತಾಯಿಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಆರ್​.ವಿ.ದೇಶಪಾಂಡೆ ನಿಯೋಗದಲ್ಲಿದ್ದರು.

ರಾಜ್ಯಪಾಲರನ್ನು ಭೇಟಿಯಾದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿರುವ ಎಲ್ಲರಿಗೂ ಲಸಿಕೆ ನೀಡುವಂತೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಲಸಿಕೆ ನೀಡಿ ಜನರ ಜೀವ ಉಳಿಸುವಂತೆ ಬೇಡಿಕೆ ಇಟ್ಟಿದ್ದೇವೆ’ ಎಂದು ತಿಳಿಸಿದರು.

(Helicopter Emergency Landing in Nelamangala With KPCC President DK Shivakumar on Board)

ಇದನ್ನೂ ಓದಿ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್.ಎಸ್ ಮಲ್ಲಿಕಾರ್ಜುನರಿಂದ ಉಚಿತ ಕೊರೊನಾ ಲಸಿಕೆ ಅಭಿಯಾನ

ಇದನ್ನೂ ಓದಿ: ಇನ್ನೂ ಎರಡು ವಾರ ಲಾಕ್​ಡೌನ್ ಮುಂದುವರಿಸಲು ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಆಗ್ರಹ

Published On - 6:30 pm, Fri, 4 June 21