ಕೊರೊನಾ ಲಸಿಕೆ ಖರೀದಿಗಾಗಿ ಗ್ಲೋಬಲ್ ಟೆಂಡರ್ ವಿಫಲ: ಒಗ್ಗೂಡಲು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ
ರಾಜ್ಯಗಳಲ್ಲಿ ವ್ಯಾಕ್ಸಿನ್ ವಿಷಯದಲ್ಲಿ ಉಂಟಾಗಿರೋ ತೊಂದರೆಯನ್ನು ಕೇಂದ್ರದ ಗಮನಕ್ಕೆ ತರಲು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಒಂದೇ ಧ್ವನಿ ಇರಬೇಕೆಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ.
ವಿಜಯವಾಡ: ವ್ಯಾಕ್ಸಿನ್ ಗ್ಲೋಬಲ್ ಟೆಂಡರ್ ವ್ಯವಹಾರದ ಕುರಿತು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪತ್ರ ಬರೆದಿದ್ದಾರೆ. ಲಸಿಕೆ ಪೂರೈಕೆಯ ಬಗ್ಗೆ ಆಂಧ್ರದ ಜಾಗತಿಕ ಟೆಂಡರ್ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ದೇಶದ ರಾಜ್ಯದ ಸಿಎಂಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯಗಳಲ್ಲಿ ವ್ಯಾಕ್ಸಿನ್ ವಿಷಯದಲ್ಲಿ ಉಂಟಾಗಿರೋ ತೊಂದರೆಯನ್ನು ಕೇಂದ್ರದ ಗಮನಕ್ಕೆ ತರಲು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಒಂದೇ ಧ್ವನಿ ಇರಬೇಕೆಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ. ಹಾಗೂ ಎಲ್ಲಾ ರಾಜ್ಯಗಳು ಒಂದಾಗಿ ಧ್ವನಿ ಎತ್ತಲು ಸಲಹೆ ನೀಡಿದ್ದಾರೆ. ಗ್ಲೋಬಲ್ ಟೆಂಡರ್ ಅನುಮೋದನೆ ಕೇಂದ್ರದ ಕೈಯಲ್ಲಿ ಇದೆ. ವ್ಯಾಕ್ಸಿನ್ಗಾಗಿ ಗ್ಲೋಬಲ್ ಟೆಂಡರ್ ಕರೆದರೂ ಒಂದೇ ಒಂದು ಟೆಂಡರ್ ದಾಖಲು ಆಗಿಲ್ಲ. ವ್ಯಾಕ್ಸಿನ್ ಲಭ್ಯತೆ ವಿಷಯದಲ್ಲಿ ಕೇಂದ್ರದ ವಿರುದ್ದ ರಾಜ್ಯಗಳು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?
ಲಸಿಕೆ ಸರಬರಾಜಿಗೆ ಆಂಧ್ರ ಸರ್ಕಾರ ನಿಗದಿಪಡಿಸಿದ ಜಾಗತಿಕ ಟೆಂಡರ್‌ಗಳ ಗಡುವು ಅವಧಿ ಗುರುವಾರ ಸಂಜೆ 5 ಗಂಟೆಗೆ ಕೊನೆಗೊಂಡಿದ್ದು, ಯಾವುದೇ ಲಸಿಕೆ ಉತ್ಪಾದಕರು ಟೆಂಡರ್ ನೋಟಿಸ್‌ಗೆ ಸ್ಪಂದಿಸಿಲ್ಲ. ಲಸಿಕೆಗಳ ಖರೀದಿಗೆ ಸಂಬಂಧಿಸಿದಂತೆ ನಮ್ಮ (ರಾಜ್ಯಗಳ) ನಿಯಂತ್ರಣದಲ್ಲಿ ಪರಿಸ್ಥಿತಿ ಇಲ್ಲ. ವ್ಯಾಕ್ಸಿನ್ ಡ್ರೈವ್ನಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ರಾಜ್ಯಗಳಿಗೆ ಲಸಿಕೆ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ.
ವ್ಯಾಕ್ಸಿನ್ ಗ್ಲೋಬಲ್ ಟೆಂಡರ್ ಕರೆ ನೀಡಿದ ಮೊದಲ ರಾಜ್ಯ ಆಂಧ್ರ ಪ್ರದೇಶ. ಹೀಗಾಗಿ ಮುಖ್ಯಮಂತ್ರಿಯಾದ ನಾನು ಹೇಳುವುದೆಂದರೆ ನಾವೆಲ್ಲಾ ಒಂದೇ ಧ್ವನಿ ಎತ್ತಬೇಕು. ವ್ಯಾಕ್ಸಿನೇಷನ್ ಡ್ರೈವ್ನ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲು ಒತ್ತಾಯಿಸಬೇಕು. ಈ ಮೊದಲು ನಡೆದಂತೆ ಈ ಬಾರಿಯೂ ನಡೆಯಬೇಕು. ಮತ್ತು ಆರೋಗ್ಯ ಸಿಬ್ಬಂದಿಗೆ ಸರಿಯಾದ ಸಮಯದಲ್ಲಿ ಲಸಿಕೆ ಸಿಗಬೇಕು ಎಂದು ಜಗನ್ ಮೋಹನ್ ರೆಡ್ಡಿ ಪತ್ರದಲ್ಲಿ ಮನವಿ ಮಾಡಿದ್ದಾರೆ.