ಬೆಂಗಳೂರು: ವಿಧಾನಸಭಾ ಅಧಿವೇಶನಕ್ಕೆ ಗೈರು ಹಾಜರಾಗಿರುವ ಶಾಸಕ ಕೆ.ಎಸ್. ಈಶ್ವರಪ್ಪ (KS Eshwarappa) ಮತ್ತು ರಮೇಶ್ ಜಾರಕಿಹೊಳಿಗೆ (Ramesh Jarkiholi) ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದಿದ್ದಾರೆ. ವಿಧಾನಸಭಾ ಅಧಿವೇಶನಕ್ಕೆ ಗೈರುಹಾಜರಾಗಿದ್ದು ಏಕೆ? ಎಂದು ಪ್ರಶ್ನಿಸಿ ಕಾಗೇರಿ (Vishweshwar Hegde Kageri) ಪತ್ರ ಬರೆದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 1 ವಾರದಿಂದ ಕೆಎಸ್ ಈಶ್ವರಪ್ಪ ಅಧಿವೇಶನದ ಕಲಾಪದಲ್ಲಿ ಹಾಜರಾಗಿರಲಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಇರುವ ಅಸಮಾಧಾನದಿಂದ ಈಶ್ವರಪ್ಪ ಕಲಾಪಕ್ಕೆ ಹಾಜರಾಗಿಲ್ಲ ಎನ್ನಲಾಗುತ್ತಿದೆ.
ವಿಧಾನಸಭೆ ಅಧಿವೇಶನ ಶಾಸಕರ ಸಾಂವಿಧಾನಿಕ ಹಕ್ಕು. ನೀವು ಸದನಕ್ಕೆ ಬರದೇ ಇದ್ದಿದ್ದು ನಮಗೆ ಅಸಂವಿಧಾನಿಕವೆನಿಸಿದೆ. ಸಾರ್ವಜನಿಕವಾಗಿ ಸದನಕ್ಕೆ ಹಾಜರಾಗಲ್ಲ ಎಂದು ಹೇಳಿರುವುದು ಕೂಡ ಒಪ್ಪಿತವಲ್ಲ. ಮುಂದಿನ ದಿನಗಳಲ್ಲಿ ನೀವು ಸದನಕ್ಕೆ ಗೈರಾಗುವುದಿಲ್ಲ ಎಂದು ಭಾವಿಸುತ್ತೇನೆ. ಸಾಂವಿಧಾನಿಕವಾಗಿ ನಡೆದುಕೊಳ್ಳಬೇಕಿರುವುದು ನಮ್ಮ ಕರ್ತವ್ಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ನಾಯಕರಾದ ಕೆಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನವೂ ಹೆಚ್ಚಾಗುತ್ತಿದೆ. ಕೆಎಸ್ ಈಶ್ವರಪ್ಪ ಈ ಬಗ್ಗೆ ಈಗಾಗಲೇ ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ. ಬೇರೆ ಸಚಿವ ಸ್ಥಾನಗಳಿಗೂ ನನ್ನ ಪ್ರಕರಣಕ್ಕೂ ಸಹ ವ್ಯತ್ಯಾಸವಿದೆ. 40 ಪರ್ಸೆಂಟ್ ಕಮಿಷನ್ನ ನನ್ನ ಪ್ರಕರಣದಲ್ಲಿ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿದೆ. ನನಗೆ ಸಚಿವ ಸ್ಥಾನ ನೀಡದಿರೋ ಬಗ್ಗೆ ಅಸಮಾಧಾನವಿದೆ. ಆದರೂ ನಮ್ಮ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕು, ಹಾಗಾಗಿ ನಾನು ಸುಮ್ಮನಿದ್ದೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದರು.