ಬೆಂಗಳೂರು. (ಫೆಬ್ರವರಿ. 14): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಫೆಬ್ರವರಿ 27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ(Karnataka Government Employees Conference) ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ (Leave) ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನೌಕರರಿಗೆ ಫೆ.27ರಂದು ರಜೆ ನೀಡಿದರೆ, ಇತರೆ ಬೇರೆ-ಬೇರೆ ಜಿಲ್ಲೆಗಳಿಂದ ಬರುವ ನೌಕರರಿಗೆ ಎರಡು ದಿನ ಅಂದರೆ ಫೆ.27 ಮತ್ತು 28ರಂದು ರಜೆ ನೀಡಲಾಗಿದೆ.
ಬೆಂಗಳೂರು ನಗರದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ (ಗೇಟ್ ನಂ.1) ಫೆ. 27ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ. ಇದರಲ್ಲಿ ಲಕ್ಷಾಂತರ ನೌಕರರು ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗಲು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸಿ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ, ನೌಕರರಿಗೆ ಫೆ. 27ರಂದು ಒಂದು ದಿನ ಹಾಗೂ ಇತರೆ ಜಿಲ್ಲೆಗಳ ಅಧಿಕಾರಿ, ನೌಕರರಿಗೆ ಪ್ರಯಾಣ ದಿನ ಸೇರಿದಂತೆ ಫೆ.27 ಮತ್ತು 28ರಂದು 2 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಷರತ್ತುಗಳನ್ವಯ ನೀಡಲಾಗಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು. ಈ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.
ಫೆಬ್ರವರಿ 27ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಇನ್ನು ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ಕೆ.ಎನ್. ರಾಜಣ್ಣ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಎಸ್. ಮಧುಬಂಗಾರಪ್ಪ, ಬೈರತಿ ಸುರೇಶ್, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಶಿವಾನಂದ ಎಸ್. ಪಾಟೀಲ, ಬಿ. ನಾಗೇಂದ್ರ, ಡಾ. ಎಂ.ಸಿ. ಸುಧಾಕರ್, ಶರಣಬಸಪ್ಪ ದರ್ಶನಾಪುರ, ಎನ್. ಚಲುವರಾಯಸ್ವಾಮಿ, ಶಿವರಾಜ ಎಸ್. ತಂಗಡಗಿ, ಲಕ್ಷ್ಮೀ ಆರ್. ಹೆಬ್ಬಾಳಕರ್, ರಹೀಂ ಖಾನ್, ಡಾ. ಶರಣಪ್ರಕಾಶ ಆರ್. ಪಾಟೀಲ, ಆರ್.ಬಿ. ತಿಮ್ಮಾಪೂರ, ಎನ್.ಎಸ್. ಭೋಸರಾಜು, ಎಸ್.ಎಸ್. ಮಲ್ಲಿಕಾರ್ಜುನ್, ಕೆ. ವೆಂಕಟೇಶ್, ಡಿ. ಸುಧಾಕರ್, ಸಂತೋಷ್ ಎಸ್. ಲಾಡ್, ಬಿ.ಝಡ್. ಜಮೀರ್ ಅಹ್ಮದ್ ಖಾನ್, ಮಂಕಾಳ ಎಸ್. ವೈದ್ಯ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಭಾಗವಹಿಸಲಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ