ದಾವಣಗೆರೆ, ಜ.15: ಸಕಲ ವೀರಶೈವ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಒತ್ತಾಯಿಸಿದರು. ಹರಿಹರ ತಾಲೂಕಿನ ಹನಗವಾಡಿ ಬಳಿಯ ಪಂಚಮಸಾಲಿ ಗುರುಪೀಠದಲ್ಲಿ ಇಂದು ನಡೆದ ಹರ ಜಾತ್ರೆಯಲ್ಲಿ ಮಾತನಾಡಿದ ಅವರು, ಸರ್ಕಾರ ಯಾವುದೇ ರಾಜಕೀಯ ಮಾಡದೆ ಶಿಫಾರಸ್ಸು ಮಾಡಬೇಕು ಎಂದರು.
ವೀರಶೈವರು ಹಾಗೂ ಲಿಂಗಾಯತರು ಬೇರೆ ಬೇರೆ ಅಲ್ಲ, ಎಲ್ಲರೂ ಒಂದೇ. ವೀರಶೈವ ಲಿಂಗಾಯತರು ಒಳಪಂಗಡಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಎಲ್ಲಾ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ತಿಳಿಯಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ಸರ್ಕಾರ ಶಿಫಾರಸು ಮಾಡಲಿ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಇತ್ತೀಚೆಗೆ ಪಂಚಮಸಾಲಿ ಸಮುದಾಯ ಹೆಚ್ಚು ಬೆಳವಣಿಗೆ ಹೊಂದುತ್ತಿದೆ. ಇದು ಸಂತಸದ ವಿಚಾರ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಜಾತಿ ಗಣತಿ ಅಂಗೀಕರಿಸುವ ಹಠಕ್ಕೆ ಬೀಳಬಾರದು; ಶಾಮನೂರು ಶಿವಶಂಕರಪ್ಪ ಎಚ್ಚರಿಕೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕೆ ಸಮುದಾಯದ ರಾಜಕೀಯ ನಾಯಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಮೀಸಲಾತಿ ನೀಡದಿದ್ದಲ್ಲಿ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆದ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದರು.
2ಎ ಮೀಸಲಾತಿ ರಾಜ್ಯ ಸರ್ಕಾರದ ಕೈಯಲ್ಲಿದೆ. ಒಬಿಸಿಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ಮೀಸಲಾತಿ ಘೋಷಿಸಬೇಕು. ಆದರೆ ಎರಡೂ ಕಡೆ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿವೆ. ಈಗ ಲೋಕಸಭೆ ಚುನಾವಣೆ ಬಂದಿದೆ. ಈ ಸಮಯದಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದೇ ಹೋದಲ್ಲಿ ಎರಡೂ ಪಕ್ಷಗಳಿಗೆ ಸಮಾಜದ ಜನ ಪಾಠ ಕಲಿಸುತ್ತಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ