
ಇದನ್ನು ಶುರುಮಾಡಿದ್ದು ಯಾರು ಅನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ, ಅವರು ಬಳಸುತ್ತಿರುವ ಭಾಷೆಯನ್ನು ಗಮನಿಸಿದರೆ ಇವರನ್ನು ನಾವು ನಾಯಕರೆಂದು ಒಪ್ಪಿಕೊಂಡಿದದ್ದೇವಲ್ಲ ಅಂತ ವ್ಯಥೆಯಾಗುತ್ತದೆ.
ಬುಧವಾರದಂದು, ಬಿಜೆಪಿಯ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಚುನಾವಾಣಾ ಪ್ರಚಾರ ಭಾಷಣದಲ್ಲಿ, ಶಿರಾ ಮತ್ತು ಆರ್ ಅರ್ ನಗರ ಉಪಚುನಾವಣೆಯ ನಂತರ ‘ಬಂಡೆ’ ಛಿದ್ರಗೊಳ್ಳುತ್ತದೆ ಮತ್ತು ‘ಹುಲಿಯಾ’ ಕಾಡಿಗೆ ಓಡುತ್ತದೆ ಎಂದು ಹೇಳಿದ್ದರು.
ಇಲ್ಲಿ ಬಂಡೆ ಯಾರು, ಹುಲಿಯಾ ಯಾರು ಅಂತ ಎಲ್ಲರಿಗೂ ಗೊತ್ತಿದೆ.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು, ಒಂದು ಟ್ವೀಟ್ ಮಾಡಿ, ಕಟೀಲ್ ಅವರನ್ನು ಅನಾಗರಿಕ ಅಂತ ಜರಿದರು.
‘‘ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು@nalinkateel ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ@siddaramaiah’’
ಅವರ ಟ್ವೀಟ್ಗೆ ಕೂಡಲೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮಾಜಿ ಮುಖ್ಯಮಂತ್ರಿ ಬೇಕಾಬಿಟ್ಟಿ ನಾಲಗೆ ಹರಿಬಿಡುತ್ತಿದ್ದಾರೆ ಅಂತ ಟ್ವೀಟ್ ಮಾಡಿದರು.
‘‘ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ. ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೆ@CTRavi_BJP’’
ಕಟೀಲ್ ಅವರು ಸಹ ಟ್ವೀಟ್ ಮಾಡಿ, ಸಿದ್ದರಾಮಯ್ಯನವರು ಬಳಸುವ ಭಾಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘‘ನಿಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ನಾನು ಭಾವಿಸುತ್ತೇನೆ ಇದು ನಿಜವೇ ಆಗಿದ್ದಲ್ಲಿ ಪೊಲೀಸರಿಗೆ ದೂರು ಕೊಡಿ, ಏಕೆಂದರೆ ಇದು ನಿಮ್ಮಂಥ ನಾಯಕರಿಗೆ ಶೋಭಿಸುವ ಭಾಷೆಯಲ್ಲ. ನಿಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗದೆ ಇದ್ದಲ್ಲಿ ನಿಮ್ಮ ಅಸಹನೆ, ಅದನ್ನು ವ್ಯಕ್ತಪಡಿಸುವ ರೀತಿಯ ಬಗ್ಗೆ ನನಗೆ ಸಹಾನುಭೂತಿಯಿದೆ,’’ ಎಂದು ಹೇಳಿದ್ದಾರೆ.