ಬಿಸಿಲ ನಾಡಲ್ಲಿ ಶೀತ ಪ್ರದೇಶದ ‘ಫಲ’! ಸ್ಟ್ರಾಬೆರಿ ಹಣ್ಣನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆದು ಮಾದರಿಯಾದ ವಿಜಯಪುರ ವಿದ್ಯಾರ್ಥಿನಿಯರು

Strawberry Cultivation in Karnataka ಪ್ರತಿ ಕೆಜಿ ಸ್ಟ್ರಾಬೇರಿ ಹಣ್ಣಿಗೆ ಕನಿಷ್ಟ 500 ರೂಪಾಯಿಗೆ ವ್ಯಾಪಾರಸ್ಥರು, ಹೊಟೇಲ್​ನವರು ಕೇಳುತ್ತಿದ್ದಾರೆ. ಮುಂಬರುವ ಜೂನ್ ವೇಳೆಗೆ 1 ಲಕ್ಷ ಸಸಿಗಳನ್ನು ತಯಾರು ಮಾಡಿ ಆಸಕ್ತಿ ಇರುವ ರೈತರಿಗೆ ನೀಡಲು ಯೋಜನೆಯನ್ನು ಸಹ ರೂಪಿಸಿದ್ದಾರೆ.

ಬಿಸಿಲ ನಾಡಲ್ಲಿ ಶೀತ ಪ್ರದೇಶದ ‘ಫಲ’! ಸ್ಟ್ರಾಬೆರಿ ಹಣ್ಣನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆದು ಮಾದರಿಯಾದ ವಿಜಯಪುರ ವಿದ್ಯಾರ್ಥಿನಿಯರು
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಟ್ರಾಬೇರಿ ಬೆಳೆ
Edited By:

Updated on: Feb 24, 2021 | 11:46 AM

ವಿಜಯಪುರ: ಬಿಸಿಲಿನ ನಾಡಲ್ಲಿ ಶೀತ ಪ್ರದೇಶದ ‘ಫಲ’ ಬೇರುಬಿಟ್ಟಿದೆ! ವಿಜಯಪುರದ ಹೊರ ಭಾಗದಲ್ಲಿನ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಈ ಸಾಧನೆ ಕಂಡುಬಂದಿದೆ. ಇದಕ್ಕೆ ಕಾರಣ ಇಲ್ಲಿನ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಸ್ಟ್ರಾಬೆರಿ ಹಣ್ಣಿನ ಸುವಾಸನೆ. ಕ್ಲಾಸ್​, ಪ್ರಾಕ್ಟಿಕಲ್, ಸೆಮಿನಾರ್, ಪರೀಕ್ಷೆ ಎಂದು ಇರುವ ವಿಶ್ವವಿದ್ಯಾನಿಲಯದಲ್ಲಿ ಸ್ಟ್ರಾಬೆರಿ ಎಲ್ಲಿಂದಾ ಬಂತು ಎನ್ನುವ ಪ್ರಶ್ನೆ ಉದ್ಭವವಾಗುವುದು ನಿಜ ಆದರೆ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕನಿಷ್ಟ ತಾಪಮಾನದಲ್ಲಿ ಬೆಳೆಯುವ ಸ್ಟ್ರಾಬೆರಿ ಹಣ್ಣನ್ನು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಬೆಳೆದಿದ್ದು, ಆ ಮೂಲಕ ಅಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಸ್ಟ್ರಾಬೆರಿ ಹಣ್ಣನ್ನು ಸಾಮಾನ್ಯವಾಗಿ ಶೀತಲ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ ಈ ವಿದ್ಯಾರ್ಥಿನಿಯರು ಭರಪೂರ ಸ್ಟ್ರಾಬೆರಿ ಹಣ್ಣು ಬೆಳೆದು ಮಾದರಿಯಾಗಿದ್ದಾರೆ.

ವಿಜಯಪುರ ಬಿಸಿಲ ನಾಡು. ಇಲ್ಲಿನ ಗರಿಷ್ಠ ತಾಪಮಾನದಲ್ಲಿ ದ್ರಾಕ್ಷಿ, ನಿಂಬೆ, ದಾಳಿಂಬೆ, ಬಾಳೆ, ಬಾರೆ ಸೇರಿದಂತೆ ಇತರೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಬಿಸಿಲಿನ ವಾತಾವರಣ ಹಾಗೂ ನೀರಿನ ಲಭ್ಯತೆಯ ಮೇಲೆ ಇವೆಲ್ಲಾ ಬೆಳೆ ಬೆಳೆಯಾಗುತ್ತದೆ. ಆದರೆ ಇದೀಗ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ಟ್ರಾಬೆರಿ ಬೆಳೆದಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

ಸ್ಟ್ರಾಬೆರಿ ಹಣ್ಣುಗಳು

ಮಹಿಳಾ ವಿವಿಯ ಸಸ್ಯಶಾಸ್ತ್ರದ ವಿದ್ಯಾರ್ಥಿನಿಯರಿಗೆ ವಿಶಿಷ್ಟವಾದ ಪ್ರಾಯೋಗಿಕ ಜ್ಞಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಇಲ್ಲಿ ಸ್ಟ್ರಾಬೆರಿ ಬೆಳೆಯಾಗಿದೆ. ಪಾಲಿಹೌಸ್​ನಲ್ಲಿ ಸ್ಟ್ರಾಬೆರಿ ಬೆಳೆಯಾಗಿದ್ದು, ತಾಪಮಾನ ನಿರ್ವಹಣೆ, ಸ್ವಯಂ ಚಾಲಿಕ ವಾಟರ್ ಸ್ಪ್ರೇ, ಮಲ್ಚಿಂಗ್ ಮಾದರಿಯಲ್ಲಿ ಇಲ್ಲಿ ಸ್ಟ್ರಾಬೆರಿ ಬೆಳೆಯಾಗಿದೆ. ನೆರೆಯ ಮಹಾರಾಷ್ಟ್ರದ ಕೃಷ್ಣಾ ನದಿ ಉಗಮ ಸ್ಥಾನವಾದ ಮಹಾಬಲೇಶ್ವರದಿಂದ ಸ್ಟ್ರಾಬೆರಿ ಸಸಿಗಳನ್ನು ತಂದು ಇಲ್ಲಿ ನೆಡಲಾಗಿದೆ.

ಸ್ಟ್ರಾಬೆರಿ ಗಿಡಗಳು

ಪ್ರತಿ ಸಸಿಗೂ 12 ರೂಪಾಯಿ ನೀಡಲಾಗಿದ್ದು, ಇಲ್ಲಿನ ಎರಡು ಪಾಲಿಹೌಸ್​ಗಳಲ್ಲಿ 1800 ಸಸಿಗಳನ್ನು ನೆಡಲಾಗಿದೆ. ಇದೀಗ ಸ್ಟ್ರಾಬೇರಿ ಫಸಲು ಬರುತ್ತಿದ್ದು, ಕಳೆದ ಮೂರು ತಿಂಗಳ ಕೆಳಗೆ ಸ್ಟ್ರಾಬೆರಿ ಸಸಿಗಳನ್ನು ನಾಟಿ ಮಾಡಲಾಗಿದೆ. ಜೂನ್​ನಿಂದ ಡಿಸೆಂಬರ್​ವರೆಗೂ ಹೆಚ್ಚು ಇಳುವರಿ ಬರುತ್ತದೆ. ಸಸ್ಯಶಾಸ್ತ್ರದ ವಿದ್ಯಾರ್ಥಿನಿಯರಿಗೆ ಸಾಂಪ್ರದಾಯಿಕ ಬೆಳೆಗಳ ಬಗ್ಗೆ ಆಧ್ಯಯನ ಮಾಡಿಸುವುದರ ಜೊತೆಗೆ ಇತರೆ ಬೆಳೆಗಳ ಆಧ್ಯಯನ ಮಾಡಿಸಲಾಗುತ್ತಿದೆ. ಜೊತೆಗೆ ಬಿಸಿಲಿನ ಪ್ರದೇಶದಲ್ಲಿಯೂ ಉತ್ತಮ ಆರ್ಥಿಕತೆಯನ್ನು ನೀಡುವ ಹಣ್ಣಿನ ಬೆಳೆ ಬೆಳೆಯಬಹುದೆಂಬ ಪ್ರಾಯೋಗಿಕ ಜ್ಞಾನವನ್ನು ಇಲ್ಲಿ ನೀಡಲಾಗುತ್ತಿದೆ ಎಂದು ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಾಬು ಲಮಾಣಿ ಹೇಳಿದ್ದಾರೆ.

ಸ್ಟ್ರಾಬೆರಿ ಗಿಡಗಳನ್ನು ವಿವಿ ಆವರಣದಲ್ಲಿ ಬೆಳೆಯಲಾಗಿದೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರೂಸಾ (ರಾಷ್ಟ್ರೀಯ ಉಚ್ಛತರ ಅಭಿಯಾನ) ಯೋಜನೆಯ ಅಡಿ ಸ್ಟ್ರಾಬೇರಿ ಬೆಳೆ ಬೆಳೆಯಲು ಸಹಾಯ ಪಡೆದುಕೊಂಡಿದೆ. ಪಾಲಿಹೌಸ್, ನಿರ್ವಹಣೆ ಸೇರಿದಂತೆ ಒಟ್ಟು 10 ಲಕ್ಷ ರೂಪಾಯಿ ಖರ್ಚು ಇದಕ್ಕಾಗಿ ಮಾಡಲಾಗಿದೆ. ಇದೀಗ ಸ್ಟ್ರಾಬೆರಿ ಹಣ್ಣಿನ ಫಸಲು ಬರುತ್ತಿದ್ದು, ಜೂನ್ ವೇಳೆಗೆ ಉತ್ತಮ ಇಳುವರಿ ಬರಲಿದೆ. ಈಗಲೇ ಸ್ಟ್ರಾಬೆರಿ ಹಣ್ಣಿಗೆ ಸ್ಥಳೀಯವಾಗಿ ಬೇಡಿಕೆ ಬಂದಿದೆ.

ಪ್ರತಿ ಕೆಜಿ ಸ್ಟ್ರಾಬೆರಿ ಹಣ್ಣಿಗೆ ಕನಿಷ್ಟ 500 ರೂಪಾಯಿಗೆ ವ್ಯಾಪಾರಸ್ಥರು, ಹೊಟೇಲ್​ನವರು ಕೇಳುತ್ತಿದ್ದಾರೆ. ಮುಂಬರುವ ಜೂನ್ ವೇಳೆಗೆ 1 ಲಕ್ಷ ಸಸಿಗಳನ್ನು ತಯಾರು ಮಾಡಿ ಆಸಕ್ತಿ ಇರುವ ರೈತರಿಗೆ ನೀಡಲು ಯೋಜನೆಯನ್ನು ಸಹ ರೂಪಿಸಿದ್ದಾರೆ. ಒಂದು ಸಸಿಗೆ 15 ರೂಪಾಯಿಯಂತೆ ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ರೈತರು ಸಹ ಒಂದು ಎಕರೆಯಲ್ಲಿ ಸ್ಟ್ರಾಬೆರಿ ಬೆಳೆದರೂ ಉತ್ತಮ ಲಾಭ ಪಡೆಯಬಹುದಾಗಿದೆ.

ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಬೆಳೆದ ಸ್ಟ್ರಾಬೆರಿ

ಪ್ರತಿ ಎಕರೆಗೆ 22,000 ಸಸಿಗಳನ್ನು ನೆಡಬಹುದು. ಇದರಿಂದ ಖರ್ಚು ಕಳೆದು 20 ರಿಂದ 22 ಲಕ್ಷ ರೂಪಾಯಿ ಆದಾಯ ಗಳಿಸಬಹುದು ಎಂದು ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಾಬು ಲಮಾಣಿ ಹೇಳಿದ್ದಾರೆ. ಸದ್ಯ 1800 ಸಸಿಗಳಿಂದ ಸ್ಟ್ರಾಬೆರಿ ಸಸಿಗಳನ್ನು ಮಾಡಿ ಸ್ಥಳೀಯ ರೈತರಿಗೆ ಹಾಗೂ ರೈತರ ಮಹಿಳೆಯರಿಗೆ ನೀಡುವ ಚಿಂತನೆಯನ್ನೂ ಮಹಿಳಾ ವಿವಿ ಕುಲಪತಿ ತುಳಸಿಮಾಲಾ ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ಉತ್ತಮ ಆರ್ಥಿಕ ಬೆಳೆಯಲ್ಲಿ ತಂತ್ರಜ್ಞಾನದ ಸಹಾಯದಿಂದ ರೈತರು ಬೆಳೆಯುವಂತಾಗಬೇಕು ಎಂದು ತೀರ್ಮಾನಿಸಿದ್ದಾರೆ.

ಒಟ್ಟಾರೆ ಬಿಸಿಲೂರಿನಲ್ಲಿ ಶೀತಪ್ರದೇಶದ ಹಣ್ಣು ಬೆಳೆಯುತ್ತಿರುವುದು ವಿಶೇಷವಾಗಿದ್ದು, ಇದಕ್ಕೆ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ರೈತರು ಸಹ ಸ್ಟ್ರಾಬೆರಿ ಬೆಳೆದು ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬ ಮಹಾದಾಸೆ ಮಹಿಳಾ ವಿಶ್ವವಿದ್ಯಾಲಯದ್ದಾಗಿದೆ.

ಇದನ್ನೂ ಓದಿ: ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲೇ ತೊಗರಿ ಬೇಳೆ ದಾಖಲೆಗೆ ಮಾರಾಟ!