ತೊಗರಿ ಕಣಜ ಖ್ಯಾತಿಯ ಕಲಬುರಗಿಯಲ್ಲೇ ತೊಗರಿ ಬೇಳೆ ದಾಖಲೆಗೆ ಮಾರಾಟ!
ಪ್ರತಿ ವರ್ಷ ಕಡಿಮೆ ಬೆಲೆಗೆ ತೊಗರಿ ಮಾರಾಟ ಮಾಡುತ್ತಿದ್ದ ರೈತರಿಗೆ ಈ ಬಾರಿ ಉತ್ತಮ ಬೆಲೆ ಬಂದಿದೆ. ಆದರೆ ಫಸಲು ಹೆಚ್ಚು ಬಂದಿಲ್ಲ. ಹೀಗಾಗಿ ಹೆಚ್ಚಿನ ಬೆಲೆ ಬಂದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ.
ಕಲಬುರಗಿ: ದಿನನಿತ್ಯ ಸಾಂಬಾರು ಮಾಡಲು ತೊಗರಿ ಬೇಳೆ ಬೇಕೆ ಬೇಕು. ಅದರಲ್ಲೂ ಉತ್ತರ ಕರ್ನಟಕದ ಮಂದಿಗೆ ದಾಲ್ ಸಬ್ಜಿ, ದಾಲ್ ಹಾಕಿರುವ ಸಾರು ಅಚ್ಚುಮೆಚ್ಚು. ತೊಗರಿ ಬೇಳೆ ಇಲ್ಲದೆ ಅವರ ಅಡುಗೆಯೇ ಪೂರ್ಣವಾಗುವುದಿಲ್ಲ. ಆದರೆ ಇತ್ತೀಚೆಗೆ ತೊಗರಿ ಬೇಳೆ ಎಲ್ಲಾ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಹಕರ ಜೇಬಿಗಿ ಕತ್ತರಿ ಬೀಳುವಂತೆ ಮಾಡಿದೆ. ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ನಿಂದ ಮಾರುಕಟ್ಟೆಗೆ ತೊಗರಿ ಮಾರಾಟಕ್ಕೆ ಬರುತ್ತದೆ. ಫೆಬ್ರವರಿಯಿಂದ ಮಾರ್ಚ್ವರಗೆ ರೈತರು ತಾವು ಬೆಳೆದ ತೊಗರಿ ಮಾರಾಟ ಮಾಡುತ್ತಾರೆ.
ರಾಜ್ಯದ ತೊಗರಿ ಕಣಜ ಎಂದೇ ಖ್ಯಾತಿಯಾಗಿರುವ ಕಲಬುರಗಿ ಜಿಲ್ಲೆಯಿಂದಲೇ ತೊಗರಿ ಬೇಳೆ ರಾಜ್ಯ ಮತ್ತು ದೇಶದ ಅನೇಕ ಭಾಗಗಳಿಗೆ ಪೂರೈಕೆಯಾಗುತ್ತದೆ. ಪ್ರತಿ ವರ್ಷ ತೊಗರಿ ಸೀಸನ್ನಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುತ್ತದೆ. ತೊಗರಿ ಸೀಸನ್ನಲ್ಲಿ ಪ್ರತಿ ಕಿಲೋ ತೊಗರಿ ಬೇಳೆ ಬೆಲೆ 80 ರೂಪಾಯಿ ಆಸುಪಾಸಿನಲ್ಲಿ ಇತ್ತು. ಆದರೆ ಈ ಬಾರಿ ತೊಗರಿ ಮಾರಾಟದ ಸೀಸನ್ನಲ್ಲಿಯೇ ಪ್ರತಿ ಕಿಲೋ ತೊಗರಿ ಬೇಳೆ ಬೆಲೆ 100ರಿಂದ 120 ರೂಪಾಯಿಗೆ ಮಾರಟವಾಗುತ್ತಿದೆ.
ತೊಗರಿ ಸೀಸನ್ನಲ್ಲಿಯೇ ತೊಗರಿ ಬೇಳೆ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ಇದೀಗ ಬೇಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೇರೆಡೆಗಿಂತ ಕಡಿಮೆ ಬೆಲೆಗೆ ತೊಗರಿ ಬೇಳೆ ಮೊದಲು ಸಿಗುತ್ತಿತ್ತು. ಆದರೆ ಇಲ್ಲಿಯೇ ಇದೀಗ ತೊಗರಿ ಬೇಳೆ ಬೆಲೆ ಪ್ರತಿ ಕಿಲೋಗೆ 100 ರೂಪಾಯಿ ದಾಟಿದೆ.
ಮೊದಲು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿ ಐದರಿಂದ ಐದುವರೆ ಸಾವಿರ ರೂಪಾಯಿಗೆ ಮಾರಾಟವಾಗುತ್ತಿತ್ತು. ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ 6000 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರವನ್ನು ಪ್ರಾರಂಭಿಸುತ್ತಿತ್ತು. ಆದರೆ ಸರ್ಕಾರ ಪ್ರಾರಂಭಿಸಿರುವ ಖರೀದಿ ಕೇಂದ್ರದತ್ತ ಜನರು ಮುಖ ಮಾಡಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಪ್ರತಿ ಕ್ವಿಂಟಲ್ ತೊಗರಿಯನ್ನು ಏಳು ಸಾವಿರದಿಂದ ಏಳುವರೆ ಸಾವಿರ ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ.
ರೈತರಿಗೆ ಸರ್ಕಾರದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಬೆಲೆ ಸಿಗುತ್ತಿದೆ. ಈ ಬೆಳವಣಿಗೆ ರೈತರ ಖುಷಿ ಹೆಚ್ಚಿಸಿದೆ. ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ತೊಗರಿ ಬೆಳೆ ಹಾಳಾಗಿ ಹೋಗಿತ್ತು. ಹೀಗಾಗಿ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ತೊಗರಿ ಬರುತ್ತಿದೆ. ರಿಲಯನ್ಸ್ ಸೇರಿದಂತೆ ಕೆಲ ಖಾಸಗಿ ಕಂಪನಿಗಳು ಕೂಡ ಬೇರೆಬೇರೆಯವರ ಹೆಸರಲ್ಲಿ ಮಾರುಕಟ್ಟೆಯಲ್ಲಿ ತೊಗರಿ ಖರೀದಿ ಮಾಡುತ್ತಿವೆ. ಹೀಗಾಗಿ ಹೆಚ್ಚಿನ ಬೆಲೆಗೆ ತೊಗರಿ ಮಾರಾಟವಾಗುತ್ತಿದೆ.
ಪ್ರತಿ ವರ್ಷ ಕಡಿಮೆ ಬೆಲೆಗೆ ತೊಗರಿ ಮಾರಾಟ ಮಾಡುತ್ತಿದ್ದ ರೈತರಿಗೆ ಈ ಬಾರಿ ಉತ್ತಮ ಬೆಲೆ ಬಂದಿದೆ. ಆದರೆ ಫಸಲು ಹೆಚ್ಚು ಬಂದಿಲ್ಲ. ಹೀಗಾಗಿ ಹೆಚ್ಚಿನ ಬೆಲೆ ಬಂದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಇದೀಗ ತೊಗರಿ ಬೇಳೆ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಾದರೂ ಕೂಡ ಅಚ್ಚರಿಯಿಲ್ಲ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ತೊಗರಿ ಬೇಳೆ
ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆದಿದ್ದರೂ ಅತ್ತ ಕಡೆ ಸುಳಿಯದ ರೈತರು..!
ಇದನ್ನೂ ಓದಿ: ಬಿಜಿನೆಸ್ ಬಿಟ್ಟು ಕೃಷಿಯತ್ತ ವಾಲಿದ ಪದವೀಧರ; ಕೈ ಹಿಡಿದು ಕಾಪಾಡುತ್ತಿದೆ ’ಹಳದಿ ಕಲ್ಲಂಗಡಿ‘
Published On - 5:20 pm, Sun, 21 February 21