ಬಿಜಿನೆಸ್​ ಬಿಟ್ಟು ಕೃಷಿಯತ್ತ ವಾಲಿದ ಪದವೀಧರ; ಕೈ ಹಿಡಿದು ಕಾಪಾಡುತ್ತಿದೆ ’ಹಳದಿ ಕಲ್ಲಂಗಡಿ‘

ಭಾರತದಲ್ಲಿ ಕೆಂಪು ಬಣ್ಣದ ಕಲ್ಲಂಗಡಿ ಬಿಟ್ಟು ಬೇರೆ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆಯುವುದು ಹೆಚ್ಚಾಗಿ ಪ್ರಚಲಿತದಲ್ಲಿ ಇಲ್ಲ. ದೇಶದ ಕೆಲವಡೇ ಮಾತ್ರ ಇತ್ತೀಚೆಗೆ ಹಳದಿ, ಪಿಂಕ್ ಸೇರಿದಂತೆ ಬೇರೆ ಬೇರೆ ಬಗೆಯ ಕಲ್ಲಂಗಡಿ ಹಣ್ಣನ್ನು ಬೆಳೆಯಲಾಗುತ್ತಿದ್ದು, ಹೆಚ್ಚಾಗಿ ಬ್ರೇಜಿಲ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಬೇರೆ ಬೇರೆ ಕಲರ್ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ.

  • ಸಂಜಯ್ ಚಿಕ್ಕಮಠ
  • Published On - 13:43 PM, 14 Feb 2021
ಬಿಜಿನೆಸ್​ ಬಿಟ್ಟು ಕೃಷಿಯತ್ತ ವಾಲಿದ ಪದವೀಧರ; ಕೈ ಹಿಡಿದು ಕಾಪಾಡುತ್ತಿದೆ ’ಹಳದಿ ಕಲ್ಲಂಗಡಿ‘
ಕೆಂಪು ಕಲ್ಲಂಗಡಿ ಮತ್ತು ಹಳದಿ ಕಲ್ಲಂಗಡಿ

ಕಲಬುರಗಿ : ಸಾಮಾನ್ಯವಾಗಿ ಕೆಂಪು ಬಣ್ಣದ ಕಲ್ಲಂಗಡಿ ಹಣ್ಣನ್ನು ಎಲ್ಲರು ನೋಡಿದ್ದೇವೆ, ತಿಂದಿದ್ದೇವೆ. ಆದರೆ ಕಲಬುರಗಿಯಲ್ಲೋರ್ವ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದು ಅಚ್ಚರಿ ಎನಿಸಿದರು ಕೂಡ ಸತ್ಯ. ಬಿಕಾಂ ಮುಗಿಸಿ, ಟ್ರ್ಯಾಕ್ಟರ್ ಸೇಲ್ಸ್ ಬಿಜಿನೆಸ್​ ಮಾಡಿಕೊಂಡಿದ್ದ ಯುವಕ, ಬಿಜಿನೆಸ್ ಬಿಟ್ಟು ಕೃಷಿಯತ್ತ ತೊಡಗಿಕೊಳ್ಳುವುದರ ಜೊತೆಗೆ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಕೃಷಿಯಲ್ಲಿ ಯಶಸ್ಸು ಗಳಿಸುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಬಸವರಾಜ್ ಪಾಟೀಲ್, ಹಳದಿ ಕಲ್ಲಂಗಡಿ ಬೆಳೆಯುವ ಮೂಲಕ ಲಾಭ ಗಳಿಸಿರುವ ರೈತ. ಮೂಲತಃ ಕೊರಳ್ಳಿ ಗ್ರಾಮದವರಾಗಿರುವ ಬಸವರಾಜ್ ಕುಟುಂಬ 50 ಎಕರೆ ಕೃಷಿ ಭೂಮಿಯನ್ನು ಹೊಂದಿದೆ. ಹೊಲದಲ್ಲಿ ಮೊದಲು ತೊಗರಿ ಸೇರಿದಂತೆ ಅನೇಕ ಸಾಂಪ್ರದಾಯಿಕ ಬೆಳೆಗಳನ್ನು ಬಸವರಾಜ್ ಕುಟುಂಬದವರು ಬೆಳೆಯುತ್ತಿದ್ದರು.

ಭೂಮಿ ಹೆಚ್ಚಿದ್ದರು ಕೂಡ, ಕೃಷಿ ಲಾಭದಾಯಕವಾಗಿರಲಿಲ್ಲ. ಇನ್ನು ಬಿಕಾಂ ಪದವಿ ಪಡೆದಿದ್ದ ಬಸವರಾಜ್, ಮೊದಲು ತಮ್ಮದೆ ಆದ ಸ್ವಂತ ಬಿಜಿನೆಸ್ ಪ್ರಾರಂಭಿಸಿದ್ದರು. ಆದರೆ ಮನಸ್ಸು ಯಾಕೋ ಕೃಷಿಯತ್ತ ಹೊರಳಿತ್ತು. ಹೀಗಾಗಿ ಕೆಲ ವರ್ಷಗಳಿಂದ ಗ್ರಾಮಕ್ಕೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಎಲ್ಲರಂತೆ ಬಸವರಾಜ್ ಕೂಡ ಸ್ಥಳೀಯವಾಗಿ ಸಿಗುವ ಕಲ್ಲಂಗಡಿ ಹಣ್ಣನ್ನು ಬೆಳೆದು ಮಾರಾಟ ಮಾಡಿದ್ದರು . ಆದರೆ ಹೊಸ ಹೊಸ ತಳಿಯ ಕಲ್ಲಂಗಡಿ ಬಗ್ಗೆ ತಿಳಿಯುತ್ತಾ ಹೋದಾಗ ಬಸವರಾಜ್​ಗೆ ಗೊತ್ತಾಗಿದ್ದು, ಹಳದಿ ಬಣ್ಣದ ಕಲ್ಲಂಗಡಿ ಹಣ್ಣಿನ ಬಗ್ಗೆ.

yellow watermelon

ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಸಾಧಿಸಿದ ರೈತ

ಅಂತರ್ಜಾಲದಲ್ಲಿ ಹೊಸ ಬಗೆಯ ಕಲ್ಲಂಗಡಿ ಬಗ್ಗೆ ತಿಳಿಯುತ್ತಾ ಹೋದಂತೆ ಬಸವರಾಜ್ ಅವರಿಗೆ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ಗೊತ್ತಾಗಿದೆ. ಹೀಗಾಗಿ ಪರಿಚಿತರೊಬ್ಬರ ಮೂಲಕ ಬೀಜಗಳನ್ನು ತರಿಸಿಕೊಂಡು ಸಸಿ ಮಾಡಿ, ತಮ್ಮ 2 ಎಕರೆ ಭೂಮಿಯಲ್ಲಿ ಹಳದಿ ಕಲ್ಲಂಗಡಿ ಹಣ್ಣನ್ನು ಬಸವರಾಜ್ ಬೆಳದಿದ್ದಾರೆ. 2 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯಲು ಬರೋಬ್ಬರಿ 2ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಸದ್ಯ 60 ಟನ್ ಕಲ್ಲಂಗಡಿ ಹಣ್ಣು ಬಂದಿದ್ದು, ಪ್ರತಿ ಕಿಲೋಗೆ 10 ರೂಪಾಯಿಯಂತೆ ಮುಂಬೈ ಮತ್ತು ಹೈದರಾಬಾದ್​ನ ಏಜೆಂಟ್​ರಿಗೆ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡಿದ್ದಾರೆ.

yellow watermelon

ಕಲ್ಲಂಗಡಿ ಹೊಲದ ಕೆಲಸದಲ್ಲಿ ನಿರತರಾಗಿರುವ ಬಸವರಾಜ್

ಸ್ವತಃ ಏಜಂಟ್​ಗಳೇ ಜಮೀನಿಗೆ ಬಂದು ಕಲ್ಲಂಗಡಿ ಹಣ್ಣನ್ನು ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ನಾಲ್ಕು ತಿಂಗಳಲ್ಲಿಯೇ ಬರೋಬ್ಬರಿ 6 ಲಕ್ಷ ರೂಪಾಯಿ ಬಂದಿದ್ದು, ಖರ್ಚು ವೆಚ್ಚವನ್ನು ತೆಗೆದು, 4 ಲಕ್ಷ ರೂಪಾಯಿ ಆದಾಯ ಈಗಾಗಲೇ ಬಂದಿದೆ. ಇನ್ನು ಒಂದಿಷ್ಟು ಕಲ್ಲಂಗಡಿ ಕಟಾವು ಹಂತಕ್ಕೆ ಬಂದಿದ್ದು, ಇದರಿಂದ ಇನ್ನಷ್ಟು ಲಾಭ ಸಿಗುವ ವಿಶ್ವಾಸದಲ್ಲಿದ್ದಾರೆ ಬಸವರಾಜ್.

ಜನರನ್ನು ಆಕರ್ಷಿಸಲು ಕಲರ್ ಕಲ್ಲಂಗಡಿ ಮೊರೆ!
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೆಂಪು ಬಣ್ಣದ ಕಲ್ಲಂಗಡಿ ಹಣ್ಣು ಸಿಗುತ್ತದೆ. ಆದರೆ ಹಳದಿ ಬಣ್ಣದ ಕಲ್ಲಂಗಡಿಯನ್ನು ಬೆಳೆಯುವ ಮೂಲಕ ಗ್ರಾಹಕರನ್ನು ಆಕರ್ಷಿಸುವುದು ಬಸವರಾಜ್ ಅವರ ಉದ್ದೇಶ. ಯಾರೇ ಆದರು ಕೂಡ ಹಳದಿ ಬಣ್ಣದ ಕಲ್ಲಂಗಡಿಯನ್ನು ನೋಡಿದರೆ, ಅದನ್ನು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಈ ಹಣ್ಣಿಗೆ ಬೇಡಿಕೆ ಇದೆ. ಕಲ್ಲಂಗಡಿ ಹಣ್ಣು ಹೆಚ್ಚು ಮಾರಾಟವಾದರೆ, ರೈತರಿಗೆ ಕೂಡ ಉತ್ತಮ ಬೆಲೆ ಸಿಗುತ್ತದೆ. ಆ ನಿಟ್ಟಿನಲ್ಲಿ ಪ್ರಯೋಗಾತ್ಮಕವಾಗಿ ಬಸವರಾಜ್ ಹಳದಿ ಕಲ್ಲಂಗಡಿ ಹಣ್ಣನ್ನು ಬೆಳೆಯುವ ಮೂಲಕ, ಅದರಲ್ಲಿ ಯಶಸ್ಸುಗಳಿಸಿದ್ದಾರೆ.

yellow watermelon

ಬಸವರಾಜ್ ಕಲ್ಲಂಗಡಿ ಬೆಳೆದ ರೈತ

ಕೆಂಪು ಕಲ್ಲಂಗಡಿಗಿಂತ ಹಳದಿ ಕಲ್ಲಂಗಡಿ ಹಣ್ಣು ರುಚಿಯಾಗಿದ್ದು, ಹೀಗಾಗಿ ಹೆಚ್ಚಿನ ಜನರು ಈ ಹಳದಿ ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಾರೆ. ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಹಳದಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು ಹೀಗಾಗಿ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ರೈತರು ಬೆಳೆದ ಜಮೀನಿಗೆ ಬಂದು ಕಲ್ಲಂಗಡಿ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.

ವಿದೇಶದಲ್ಲಿ ಹೆಚ್ಚು ಬೇಡಿಕೆ:
ಹೌದು ಭಾರತದಲ್ಲಿ ಕೆಂಪು ಬಣ್ಣದ ಕಲ್ಲಂಗಡಿ ಬಿಟ್ಟು ಬೇರೆ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆಯುವುದು ಹೆಚ್ಚಾಗಿ ಪ್ರಚಲಿತದಲ್ಲಿ ಇಲ್ಲ. ದೇಶದ ಕೆಲವಡೇ ಮಾತ್ರ ಇತ್ತೀಚೆಗೆ ಹಳದಿ, ಪಿಂಕ್ ಸೇರಿದಂತೆ ಬೇರೆ ಬೇರೆ ಬಗೆಯ ಕಲ್ಲಂಗಡಿ ಹಣ್ಣನ್ನು ಬೆಳೆಯಲಾಗುತ್ತಿದ್ದು, ಹೆಚ್ಚಾಗಿ ಬ್ರೇಜಿಲ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಬೇರೆ ಬೇರೆ ಕಲರ್ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ. ಕರ್ನಾಟಕದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆಯುವ ನಮ್ಮ ದೇಶದಲ್ಲಿ ಕೂಡ ಕಲರ್ ಕಲರ್ ಕಲ್ಲಂಗಡಿ ಹಣ್ಣನ್ನು ಬೆಳೆಯುವ ಮೂಲಕ, ಗ್ರಾಹಕರನ್ನು ಆಕರ್ಷಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಬಸವರಾಜ್ ಹಳದಿ ಬಣ್ಣದ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಯಶಸ್ವಿಯಾಗಿದ್ದಾರೆ.

ನಾನು ಅನೇಕ ವರ್ಷಗಳಿಂದ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಿದ್ದೇನೆ. ಕಲ್ಲಂಗಡಿ ಹಣ್ಣಿನಲ್ಲಿ ಸುಧಾರಿತ ತಳಿಯ ಬಗ್ಗೆ ತಿಳಿಯಲು ಇಂಟರ್​ನೆಟ್​ನಲ್ಲಿ ಸರ್ಚ್ ಮಾಡುತ್ತಿದ್ದಾಗ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ಮಾಹಿತಿ ಸಿಕ್ಕಿತು. ಪರಿಚಿತರೊಬ್ಬರ ಮೂಲಕ ಬೀಜವನ್ನು ತರಿಸಿಕೊಂಡು ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದೇನೆ. ಕೆಂಪು ಕಲ್ಲಂಗಡಿಗಿಂತ ಇದು ಸಿಹಿಯಾಗಿದೆ. ಜೊತೆಗೆ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಹಳದಿ ಕಲ್ಲಂಗಡಿ ಹಣ್ಣಿನಿಂದ ಗ್ರಾಹಕರನ್ನು ಕೂಡ ಆಕರ್ಷಿಸಬಹುದಾಗಿದೆ ಎಂದು ಹಳದಿ ಕಲ್ಲಂಗಡಿ ಬೆಳೆದಿರುವ ರೈತ ಬಸವರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ: ಬೆಳೆ ಸಮೀಕ್ಷೆ ಆ್ಯಪ್​ ಬಗ್ಗೆ ರೈತರಿಗೆ ಮಾಹಿತಿ