ಬಿ.ವೈ.ವಿಜಯೇಂದ್ರ ರಾಜ್ಯದ ರಾಜಾಹುಲಿ ಆಗ್ತಾರೆ: ಎಸ್.ಟಿ ಸೋಮಶೇಖರ್
ವೀರಶೈವ ಮಹಾಸಭಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಬಿ.ವೈ.ವಿಜಯೇಂದ್ರ ರಾಜ್ಯದ ರಾಜಾಹುಲಿ ಆಗುತ್ತಾರೆ ಎಂದು ಮಾತನಾಡಿದ್ದಾರೆ.
ಮೈಸೂರು: ಬಿ.ವೈ.ವಿಜಯೇಂದ್ರ ರಾಜ್ಯದ ರಾಜಾಹುಲಿ ಆಗುತ್ತಾರೆ ಎಂದು ವೀರಶೈವ ಮಹಾಸಭಾ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಭಾಷಣದಲ್ಲಿ ಮಾತನಾಡಿದ್ದಾರೆ. ಈ ಕುರಿತಂತೆ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕೊಂಡಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಯಶಸ್ವಿ ಮುಖಮಂತ್ರಿ ಆಗಿದ್ದಾರೆ. ಅವರಿಗೆ 40 ವರ್ಷಗಳ ಸುದೀರ್ಘ ಅನುಭವವಿದೆ. ಅವರ ಮಗ ವಿಜಯೇಂದ್ರ ಕೂಡ ತಂದೆ ಹಾಕಿಕೊಟ್ಟ ಹಾದಿಯಲ್ಲೇ ನಡೆದುಬಂದಿದ್ದಾರೆ. ನೂರಾರು ಪೆಟ್ಟು ಬಿದ್ದ ಮೇಲೆಯೆ ವಿಗ್ರಹವಾಗುವುದು. ಹೀಗಾಗಿ ವಿಜಯೇಂದ್ರಗೂ ಪೆಟ್ಟು ಬೀಳುತ್ತಿವೆ. ಯಡಿಯೂರಪ್ಪ ಅವರ ರೀತಿಯಲ್ಲಿಯೇ ಮುಂದಿನ ದಿನಗಳಲ್ಲಿ ವಿಜಯೇಂದ್ರ ಕೂಡಾ ರಾಜ್ಯದ ರಾಜಹುಲಿ ಆಗಲಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿ. ವೈ.ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಮಸ್ಯೆ ಹೊಸದಲ್ಲ. ಬಹಳ ಜನ ಹಾವು, ಚೇಳಿನ ರೀತಿಯಲ್ಲಿ ಅವರಿಗೆ ಸಮಸ್ಯೆ ಕೊಡುತ್ತಾರೆ. ಅವರಿಗೆ ಗೊತ್ತಿಲ್ಲ ಬಿ.ಎಸ್.ವೈ ಹಾವು, ಚೇಳಿನ ಜತೆ ಬದುಕಿದ್ದಾರೆ ಎಂಬುದು. ಎಲ್ಲಿಯವರೆಗೆ ಜನ ಆಶೀರ್ವಾದ ನೀಡುತ್ತಾರೋ ಅಲ್ಲಿಯವರೆಗೂ ಯಡಿಯೂರಪ್ಪ ಅವರನ್ನ ಏನೂ ಮಾಡಲಾಗುವುದಿಲ್ಲ. ಅಧಿಕಾರ ಇರಲಿ ಇಲ್ಲದೆ ಇರಲಿ ಬಿಎಸ್ವೈ ಅವರನ್ನು ಜನರು ಪ್ರೀತಿಸುತ್ತಾರೆ. ನನ್ನನ್ನು ರಾಜ್ಯದಲ್ಲಿ ಎಲ್ಲಿ ಕಂಡರೂ ಜನರು ಬಿಎಸ್ವೈ ಪುತ್ರ ಎಂದೇ ಗುರುತಿಸುತ್ತಾರೆ. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ನನಗೆ ರಾಜಕೀಯ ಜನ್ಮ ನೀಡಿದ್ದು ವರುಣಾ ಕ್ಷೇತ್ರ. ಇಲ್ಲಿಯ ಜನ ನನಗೆ ಪ್ರೀತಿ ತೋರಿ ರಾಜಕೀಯ ಶಕ್ತಿ ತುಂಬಿದ್ದಾರೆ. ಅದೇ ಶಕ್ತಿಯಿಂದ ಶಿರಾ ಹಾಗೂ ಕೆ.ಆರ್.ಪೇಟೆಯಲ್ಲಿ ನಾನು ಕೆಲಸ ಮಾಡಲು ಅವಕಾಶ ಆಯಿತು. ನಾನು ರಾಜಕೀಯದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ಆದರೆ ನಾನು ಇರುವವರೆಗೂ ನಮ್ಮ ಮನೆ ಬಳಿ ಬಂದವರ ಕಷ್ಟ ಕೇಳುತ್ತೇನೆ. ಇದನ್ನ ನನ್ನ ತಂದೆ ನನಗೆ ಹೇಳಿಕೊಟ್ಟಿದ್ದಾರೆ ಎಂದು ಮಾತನಾಡಿದ್ದಾರೆ.
ಇದನ್ನೂ ಓದಿ: B.Y. ವಿಜಯೇಂದ್ರಗೆ ಹೆಚ್ಚಿದ ಬೇಡಿಕೆ.. ಮಸ್ಕಿ ಬೈಎಲೆಕ್ಷನ್ ಉಸ್ತುವಾರಿ ವಹಿಸಲು ‘ಮಸ್ಕಾ’!
ಕಾಲು ಜಾರಿದರೆ ಅನಾಹುತ ಆಗಲ್ಲ. ನಾಲಿಗೆ ಜಾರಿದರೆ ಆಗುವ ಅನಾಹುತ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾಡಿನೆಲ್ಲೆಡೆ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಹೋರಾಟದ ಹೆಸರಲ್ಲಿ ಸಮಾಜವನ್ನು ಒಡೆಯಬಾರದು. ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ, ನುಡಿದಂತೆ ನಡೆಯುವ ಶಕ್ತಿ ಇರುವುದು ನನ್ನ ತಂದೆಗೆ ಮಾತ್ರ ಎಂದು ಹೇಳಿದರು.