ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮೊಗದಲ್ಲಿ ಸಂತಸ :
ವಿಜಯಪುರ ನಗರದ ಬಿಎಲ್ಇಡಿ ಸಂಸ್ಥೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಇಂದು ಸ್ವತಃ ರಾಷ್ಟಪತಿಗಳ ಕೈಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದು, ಇದು ನನ್ನ ಊಹೆಗೂ ನಿಲುಕುತ್ತಿಲ್ಲಾ! ನಾನು ದೇಶದ ಪ್ರಥಮ ಪ್ರಜೆಯವರಿಂದ ಚಿನ್ನದ ಪದಕ ಪಡೆಯುತ್ತೇನೆ ಎಂದುಕೊಂಡಿರಲಿಲ್ಲಾ!! ಈಗಲೂ ನನಗೆ ಇದನ್ನು ನಂಬಲಾಗುತ್ತಿಲ್ಲಾ!!! ಎಂದು ನರ್ಸಿಂಗ್ ವಿದ್ಯಾರ್ಥಿನಿ ಸೋನಾಲಿ ದೇವಾನಂದ ರಾಠೋಡ ಹೇಳಿದ್ದಾರೆ.
ಬಡ ವಿದ್ಯಾರ್ಥಿನಿಗೆ ಒಲಿದ ಎರಡು ಚಿನ್ನದ ಪದಕಗಳು :
ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಸೋನಾಲಿ ರಾಠೋಡ ಅವರಿಗೆ ಎರಡು ಚಿನ್ನದ ಪದಕಗಳನ್ನು ನೀಡಿದ್ದಾರೆ. ಬಿ.ಎಸ್.ಸಿ ನರ್ಸಿಂಗ್ ದ್ವಿತೀಯ ಹಾಗೂ ಬಿ.ಎಸ್.ಸಿ ನರ್ಸಿಂಗ್ ತೃತೀಯ ವರ್ಷ ಹೀಗೆ ಎರಡು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಸೋನಾಲಿಗೆ ಚಿನ್ನದ ಪದಕಗಳು ದೊರಕಿವೆ. ವಿದ್ಯಾರ್ಥಿನಿ ಸೋನಾಲಿ ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆಯುವ ವೇಳೆ ಬಿಎಲ್ಡಿಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಶೋಲ್ಮೊನ್ ಚೋಪಡೆ ಸಹ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು.
ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಸೋನಾಲಿ ದೇವಾನಂದ ರಾಠೋಡ
ಸಾಧನೆಗೆ ಬಡತನ ಅಡ್ಡಿಯಾಗದು :
ನರ್ಸಿಂಗ್ ಕಾಲೇಜಿಗೆ ಸೇರಿದಾಗ ನಾನು ಯಾವುದೇ ಪದಕ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ. ಮನೆಯಲ್ಲಿ ಬಡತನವಿದ್ದರೂ ತಂದೆ- ತಾಯಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ಬಡತನದಲ್ಲಿಯೇ ಬೆಳೆದ ನನಗೆ ಏನಾದರು ಸಾಧನೆ ಮಾಡಿ ನಮ್ಮ ತಂದೆ ತಾಯಿಗೆ ಹೆಸರು ತರಬೇಕೆಂಬ ಆಸೆಯಿತ್ತು. ನಿತ್ಯ ಮನೆಯಲ್ಲಿ ಕೆಲಸ ಮಾಡಿ ಎಲ್ಲರಿಗೂ ಸಹಾಯ ಮಾಡುತ್ತಿದ್ದೆ. ಓದಿನ ವಿಚಾರದಲ್ಲಿ ಎಂದು ಬಲವಂತವಾಗಿ ಓದಿಲ್ಲ. ಆಸಕ್ತಿಯಿಂದ ಓದುತ್ತಿದ್ದೆ ಎಂದು ವಿದ್ಯಾರ್ಥಿನಿ ಸೋನಾಲಿ ತಿಳಿಸಿದ್ದಾರೆ.
ಮೊದಲ ವರ್ಷದಲ್ಲಿ ಉತ್ತಮ ಅಂಕಗಳು ಬಂದವು. ನಾನು ನಿರೀಕ್ಷೆ ಮಾಡದಷ್ಟು ಅಂಕಗಳು ಬಂದಿದೆ. ಇನ್ನಷ್ಟು ಆಸಕ್ತಿ ವಹಿಸಿ ಓದಿದರೆ ಹೆಚ್ಚು ಅಂಕ ಬರುತ್ತವೆ ಎಂದು ಓದಿದೆ. ಎರಡನೇಯ ಹಾಗೂ ಮೂರನೇ ವರ್ಷದಲ್ಲಿ ಎಲ್ಲರಿಗಿಂಗ ಹೆಚ್ಚು ಅಂಕಗಳನ್ನು ಗಳಿಸಿದೆ. ಹೆಚ್ಚು ಅಂಕಗಳು ಬಂದ ಕಾರಣ ಎರಡು ಚಿನ್ನದ ಪದಕಗಳು ನನಗೆ ಲಭಿಸಿದವು. ನಮ್ಮ ಬಡತನ ನಮ್ಮ ಓದಿಗೆ ಅಡ್ಡಿಯಾಗದು ಎಂದು ಇದರಿಂದ ಮನಗಂಡೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ನನಗೆ ಉತ್ತಮ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ್ದು ನನಗೆ ಹೆಚ್ಚು ಸಹಾಯಕವಾಯಿತು ಎಂದು ಸೋನಾಲಿ ಹೇಳಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರಧಾನ ಮಾಡುತ್ತಿರುವ ದೃಶ್ಯ
ಅಭಿನಂದನೆ:
ಬಡತನದಲ್ಲಿ ಇಂತಹ ಸಾಧನೆ ಮಾಡಿ ಸೋನಾಲಿ ರಾಠೋಡ ನರ್ಸಿಂಗ್ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಷ್ಟ್ರಪತಿಗಳಿಂದ ಘಟಿಕೋತ್ಸದವಲ್ಲಿ ಚಿನ್ನದ ಪದಕ ಪಡೆದಿದ್ದಕ್ಕೆ ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್, ನರ್ಸಿಂಗ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿನಿ ಸೋನಾಲಿಗೆ ಅಭಿನಂದಿಸಿದ್ದಾರೆ.
ಬಿಎಲ್ಇಡಿ ಸಂಸ್ಥೆಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರಶಸ್ತಿ ಸ್ವೀಕರಿಸುತ್ತಿರುವ ದೃಶ್ಯ
ಸೋನಾಲಿ ದೇವಾನಂದ ರಾಠೋಡ