ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವ | ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ: ರಾಮನಾಥ ಕೋವಿಂದ್
ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವದ ಅಂಗವಾಗಿ ನಿಮ್ಹಾನ್ಸ್ ಸಮಾವೇಶ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗವಹಿಸಿದ್ದಾರೆ.
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವದ ಅಂಗವಾಗಿ ನಿಮ್ಹಾನ್ಸ್ ಸಮಾವೇಶ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗವಹಿಸಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಹೆಣ್ಣುಮಕ್ಕಳಿಗೆ ಪದಕ ನೀಡಿ ಗೌರವಿಸಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಘಟಿಕೋತ್ಸವದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಂದ ಸಾಧನೆ ಅಪಾರ. ಹೆಣ್ಣುಮಕ್ಕಳೇ ಹೆಚ್ಚು ಪದಕ ಪಡೆದಿರುವುದು ಹೆಮ್ಮೆಯ ವಿಷಯ. ಪದಕ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾತನಾಡಿದರು.
ಕೊರೊನಾದಿಂದ ಎಲ್ಲ ಕಡೆ ಸಾಕಷ್ಟು ಸಂಕಷ್ಟ ಎದುರಾಯಿತು. ಈ ನಿಟ್ಟಿನಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯುನಿವರ್ಸಿಟಿ ತರಬೇತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಕಡಿಮೆ ಸಮಯದಲ್ಲಿ ಹಲವು ವ್ಯಾಕ್ಸಿನ್ಗಳ ಸಂಶೋಧನೆ ನಡೆಸಿದ್ದಾರೆ. ‘ಆತ್ಮನಿರ್ಭರ ಭಾರತ’ದಡಿ ವಿದೇಶಗಳಿಗೂ ಲಸಿಕೆ ನೀಡಲಾಗಿದೆ. ಈ ಕೊರೊನಾ ಸಂಕಷ್ಟ ಭವಿಷ್ಯದಲ್ಲಿ ಹೇಗೆ ಎಚ್ಚರವಾಗಿರಬೇಕು ಎಂಬುದರ ಕುರಿತಾಗಿ ಪಾಠ ಕಲಿಸಿಕೊಟ್ಟಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ನಿಮ್ಮ ಶಿಕ್ಷಣ ಇಲ್ಲಿಗೆ ಮುಗಿಯಲ್ಲ, ಒಂದು ಹಂತ ಮುಕ್ತಾಯವಾಗಿದೆ ಅಷ್ಟೆ. ಆರೋಗ್ಯ ಕ್ಷೇತ್ರದಲ್ಲಿ ಪ್ರತಿಕ್ಷಣ ಹೊಸ ಹೊಸ ಬೆಳವಣಿಗೆ ಆಗುತ್ತಿರಬೇಕು. ಕೊವಿಡ್ ಲಸಿಕೆ ಸಂಶೋಧನೆಗೆ ವಿಜ್ಞಾನಿಗಳೇ ಉದಾಹರಣೆ. ವೈರಸ್ಅನ್ನು ತಕ್ಷಣಕ್ಕೆ ಹೇಗೆ ಅರ್ಥ ಮಾಡಿಕೊಂಡು ಅಧ್ಯಯನ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.