ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಪತಿ ಜವಾನ…ಪತ್ನಿ ಪಂಚಾಯತಿಯ ಅಧ್ಯಕ್ಷೆ!
ಪತ್ನಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಗಿದ್ದರೂ ಪಂಚಾಯತಿಯಲ್ಲಿ ಜವಾನನಾಗಿರುವ ಬಸವರಾಜ ಮಾತ್ರ ಈಗಲೂ ಪಂಚಾಯತಿಯಲ್ಲಿ ಕಸ ಗುಡಿಸುವುದು, ಕುರ್ಚಿ ಒರೆಸುವುದು, ಪಂಚಾಯತಿ ಅಧಿಕಾರಿಗಳು ಹೇಳಿದ ಕೆಲಸ ಮಾಡುವುದು, ಅಧ್ಯಕ್ಷೆ ಮತ್ತು ಸದಸ್ಯರು ಪಂಚಾಯತಿಯಲ್ಲಿ ಸೇರಿದಾಗ ಚಹಾ ತಂದುಕೊಡುವುದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದಾರೆ.
ಹಾವೇರಿ: ಜಿಲ್ಲೆಯೊಂದರ ಗ್ರಾಮ ಪಂಚಾಯತಿಯಲ್ಲಿ ಪತಿ ಕಳೆದ ಹಲವು ವರ್ಷಗಳಿಂದ ಜವಾನನಾಗಿ ಕೆಲಸ ಮಾಡುತ್ತಿದ್ದು, ಅದೇ ಪಂಚಾಯತಿಗೆ ಈಗ ಜವಾನನ ಪತ್ನಿಯೇ ಅಧ್ಯಕ್ಷೆ ಆಗಿದ್ದಾಳೆ. ಪತ್ನಿ ಅಧ್ಯಕ್ಷೆ ಆಗಿದ್ದರೂ ಪತಿ ಎಂದಿನಂತೆ ತನ್ನ ಜವಾನ ಕೆಲಸ ಮಾಡುತ್ತಿದ್ದಾರೆ. ಇಂತಹದೊಂದು ಅಪರೂಪದ ಪಂಚಾಯತಿ ಎಲ್ಲಿದೆ ಅಂತೀರಾ ಈ ಸ್ಟೋರಿ ನೋಡಿ.
ಹೌದು ಹೀಗೆ ಜವಾನ ಕೆಲಸ ಮಾಡುತ್ತಿರುವ ಪತಿಯ ಹೆಸರು ಬಸವರಾಜ ಕಿವಡೇರ. ಸುಮಾರು 23 ವರ್ಷಗಳಿಂದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮ ಪಂಚಾಯತಿಯಲ್ಲಿ ಜವಾನ ಕೆಲಸ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಗ್ರಾಮಸ್ಥರು, ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರಿಂದ ಯಾವುದೇ ಕೆಟ್ಟ ಹೆಸರು ತರಿಸಿಕೊಳ್ಳದೆ ಎಲ್ಲ ಕೆಲಸ ಮಾಡಿಕೊಂಡು ಜನರ ಮೆಚ್ಚುಗೆ ಗಳಿಸಿದ್ದಾರೆ.
ಪಂಚಾಯತಿಯಲ್ಲಿ ಜವಾನರಾಗಿರುವ ಬಸವರಾಜನ ಪತ್ನಿ ಅವರಿವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆ ಸಮಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಪತಿಯ ಕೆಲಸ ನೋಡಿದ್ದ ಗ್ರಾಮಸ್ಥರು ಒಂದಾಗಿ ಜವಾನನ ಪತ್ನಿಯನ್ನೇ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ್ದಾರೆ. ನಂತರ ಪಂಚಾಯತಿಯ ಅಧ್ಯಕ್ಷೆ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು.
ಅ ವರ್ಗದ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದರೂ ಸದಸ್ಯರು ಹಾಗೂ ಗ್ರಾಮಸ್ಥರು ಬಹುಮತದಿಂದ ಬಸವರಾಜನ ಪತ್ನಿಯನ್ನೇ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ಸದ್ಯ ಪತಿ ಜವಾನನಾಗಿರುವ ಪಂಚಾಯತಿಗೆ ಅಧ್ಯಕ್ಷೆಯಾಗಿರುವ ಪತ್ನಿ ಗಂಗಮಾಳವ್ವ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ.
ಪತ್ನಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಗಿದ್ದರೂ ಪಂಚಾಯತಿಯಲ್ಲಿ ಜವಾನನಾಗಿರುವ ಬಸವರಾಜ ಮಾತ್ರ ಈಗಲೂ ಪಂಚಾಯತಿಯಲ್ಲಿ ಕಸ ಗುಡಿಸುವುದು, ಕುರ್ಚಿ ಒರೆಸುವುದು, ಪಂಚಾಯತಿ ಅಧಿಕಾರಿಗಳು ಹೇಳಿದ ಕೆಲಸ ಮಾಡುವುದು, ಅಧ್ಯಕ್ಷೆ ಮತ್ತು ಸದಸ್ಯರು ಪಂಚಾಯತಿಯಲ್ಲಿ ಸೇರಿದಾಗ ಚಹಾ ತಂದುಕೊಡುವುದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದಾನೆ. ಪತ್ನಿಯೇ ಅಧ್ಯಕ್ಷೆಯಾಗಿ ಅಧ್ಯಕ್ಷೆ ಚೇರ್ ಮೇಲೆ ಕುಳಿತಿದ್ದರೂ ಪತಿ 23 ವರ್ಷಗಳಿಂದ ಮಾಡಿಕೊಂಡು ಬಂದಿರುವ ಜವಾನನ ಕೆಲಸ ಮಾತ್ರ ಬಿಟ್ಟಿಲ್ಲ.
ಗ್ರಾಮದ ಜನರ ಪ್ರೀತಿಯಿಂದ ಪತ್ನಿಯನ್ನ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಿದ್ದೆ. ಗ್ರಾಮಸ್ಥರು ಅಷ್ಟೇ ಪ್ರೀತಿಯಿಂದ ಪತ್ನಿಯನ್ನ ತಮ್ಮ ಮಗಳಂತೆ ಸದಸ್ಯೆಯಾಗಿ ಆಯ್ಕೆ ಮಾಡಿದ್ದರು. ಈಗ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಸೇರಿಕೊಂಡು ಪತ್ನಿಯನ್ನೇ ಗ್ರಾಮ ಪಂಚಾಯತಿ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ಇದೊಂದು ಖುಷಿಯ ವಿಚಾರ. ಆದರೆ ಸುಮಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಜವಾನ ಕೆಲಸವನ್ನ ಇಂದಿಗೂ ಮುಂದುವರೆಸಿದ್ದೇನೆ ಎಂದು ಗ್ರಾಮ ಪಂಚಾಯತಿ ಜವಾನ ಬಸವರಾಜ ಕಿವಡೇರ ಹೇಳಿದ್ದಾರೆ.
ಕೈಗೆ ಅಧಿಕಾರ ಸಿಕ್ಕರೆ ಸಾಕು ಎನ್ನುವ ಜನರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಇಂತಹದರಲ್ಲಿ ಪತ್ನಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದರೂ ಪತಿ ಅದೇ ಪಂಚಾಯತಿಯಲ್ಲಿ ಜವಾನ ಕೆಲಸ ಮಾಡುತ್ತಿದ್ದಾರೆ. ಪತ್ನಿಯೇ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರೂ ಪತಿ ಜವಾನ ಕೆಲಸ ಮಾಡುತ್ತಿರುವುದು ಗ್ರಾಮದ ಜನರಿಗೂ ಹೆಮ್ಮೆಯ ವಿಷಯವಾಗಿದೆ.
ಹುಬ್ಬಳ್ಳಿ : ವರೂರು ಗ್ರಾಮ ಪಂಚಾಯತಿನಲ್ಲಿ ಹೆಂಡತಿ ಅಧ್ಯಕ್ಷೆ, ಗಂಡ ಉಪಾಧ್ಯಕ್ಷ