ಕೊಪ್ಪಳ: ಎದ್ರೆ ನಡೆಯೋಕೆ ಆಗ್ತಿಲ್ಲ.. ಕುಂತ್ರೆ ಮಲಗೋಕಾಕ್ತಿಲ್ಲ.. ಡೆಂಘಿ, ಚಿಕೂನ್ ಗುನ್ಯಾ ಸಾಂಕ್ರಾಮಿಕ ರೋಗಕ್ಕೆ ಕೊಪ್ಪಳದ ಜನತೆ ಹೈರಾಣಾಗಿದ್ದಾರೆ.
ಡೆಂಘೀ, ಚಿಕೂನ್ ಗುನ್ಯಾ ಮಹಾಮಾರಿಗೆ ಜನ ಹೈರಾಣ:
ಕೊಪ್ಪಳ ತಾಲೂಕಿನ ಗಬ್ಬೂರ ಗ್ರಾಮಸ್ಥರನ್ನ ಸಾಂಕ್ರಾಮಿಕ ರೋಗ ಅಕ್ಷರಶಃ ಹಿಂಡಿ ಹಿಪ್ಪೆ ಮಾಡ್ತಿದೆ. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ನಿವಾಸಗಳ ಕುಟುಂಬಸ್ಥರು ಹಾಸಿಗೆ ಹಿಡಿದು ಮಲಗಿದ್ದಾರೆ. ಡೆಂಘೀ, ಚಿಕೂನ್ ಗುನ್ಯಾ ಜನ್ರನ್ನ ಬಾಧಿಸ್ತಿದ್ದು, ವೃದ್ಧರು, ಕಿರಿಯರು, ಸಣ್ಣ ಮಕ್ಕಳು ರೋಗಕ್ಕೆ ತುತ್ತಾಗಿದ್ದಾರೆ.
ಕೊಪ್ಪಳದ ಬಹುತೇಕ ಜನರು ಕೀಲು, ಮೂಳೆ ನೋವಿನಿಂದ ಬಳಲುತ್ತಿದ್ದಾರೆ. ಎದ್ದು ನಡೆಯಲಾಗದಷ್ಟು ಆರೋಗ್ಯ ಹೈರಣಾಗಿದೆ. ಅಲ್ಲದೆ, ತಮ್ಮವರನ್ನ ನೋಡಲು ಬರೋ ಸಂಬಂಧಿಕರಿಗೂ ರೋಗ ಅಂಟುತ್ತಿದ್ದು, ಗ್ರಾಮದತ್ತ ಯಾರೂ ಸುಳಿಯುತ್ತಿಲ್ಲ ಅಂತಾ ಹೇಳಲಾಗ್ತಿದೆ. ಇನ್ನು ಮಲಗಿದವರನ್ನ ಆರೈಕೆ ಮಾಡಲು ಆಗದಷ್ಟು ಇಡೀ ಗ್ರಾಮವನ್ನೇ ರೋಗ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದೆ.
ರೋಗಕ್ಕೆ ತುತ್ತಾದ ಗ್ರಾಮಸ್ಥರು ಜಿಲ್ಲಾಸ್ಪತ್ರೆ, ಗಿಣಗೇರಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 15 ದಿನಗಳ ಬಳಿಕ ಡೆಂಘೀ, ಚಿಕೂನ್ ಗುನ್ಯಾ ಹೆಚ್ಚಾಗಿದ್ದು, ಹಾಸ್ಪಿಟಲ್ಗೆ ಅಲೆಯೋದೆ ಜನ್ರಿಗೆ ನಿತ್ಯದ ಕಾಯಕವಾಗಿದೆ. ಇನ್ನು ಗ್ರಾಮದಲ್ಲಿ ಕುಡಿಯೋ ನೀರು, ಸೊಳ್ಳೆ ಕಾಟಕ್ಕೆ ರೋಗ ಉಲ್ಭಣಿಸಿದೆ ಎನ್ನಲಾಗ್ತಿದೆ.
ಆದ್ರೆ, ಗ್ರಾಮಕ್ಕೆ ಗ್ರಾಮವೇ ಮಲಗಿದ್ರೂ ಜನ ಪ್ರತಿನಿಧಿಗಳು ಇತ್ತ ತಲೆ ಹಾಕಿಲ್ಲ. ಇವಾಗ ಜಿಲ್ಲಾಸ್ಪತ್ರೆ ಆರೋಗ್ಯಧಿಕಾರಿಗಳು ಗಿಣಗೇರಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ 3 ಡೆಂಘೀ ಪ್ರಕರಣ ದಾಖಲಾಗಿದ್ದು, ಯಾರೂ ಭಯಬೀಳ್ಬೇಡಿ ಅಂತಾ ಆರೋಗ್ಯಾಧಿಕಾರಿಗಳು ಅಭಯ ನೀಡಿದ್ದಾರೆ.