ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಚೆನ್ನನಕೆರೆ ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಷ್ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು. ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ ನಂತರ ತಮ್ಮ ಜೊತೆಗೆ ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಸುಮಲತಾ ತರಾಟೆಗೆ ತೆಗೆದುಕೊಂಡರು.
ಎಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ನಿಮಗೆ ತಿಳಿದಿಲ್ಲವೇ? ನಾನು ಬಂದು ತೋರಿಸಬೇಕೆ? ಅಕ್ರಮ ಮಾಡಿದವರ ವಿರುದ್ಧ ಎಷ್ಟು ಫೈನ್ ಹಾಕಿದ್ದೀರಿ? ಏನು ಕ್ರಮ ಆಗಿದೆ ಎಂದು ಪ್ರಶ್ನಿಸಿದರು.
ನಿನ್ನೆ ಇಲ್ಲಿ ಗಣಿಗಾರಿಕೆ ಚಟುವಟಿಕೆ ನಡೆದಿರುವ ಗುರುತು ಕಾಣಿಸುತ್ತಿದೆ. ದೊಡ್ಡ ದೊಡ್ಡ ಟ್ರಕ್‌ಗಳು ಓಡಾಡಿರುವ ಗುರುತು ಕಾಣಿಸುತ್ತಿದೆ. ಇಲ್ಲಿ ಏನೂ ನಡೆಯುತ್ತಿಲ್ಲ ಎಂದು ಸಭೆಗಳಲ್ಲಿ ಹೇಳುತ್ತೀರಿ. ಆದರೆ ವಾಸ್ತವ ಬೇರೆಯೇ ಇದೆ ಎಂದು ಆಕ್ಷೇಪಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಮನವಿ ಸಲ್ಲಿಸಿದರು. ಕೆರೆಗೆ ನೀರು ತುಂಬಿಸಬೇಕಿದೆ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ ಎಂದು ವಿನಂತಿಸಿದರು.
ಚೆನ್ನನಕೆರೆ ಗ್ರಾಮದ ಬಳಿ ದಾರಿಗೆ ಅಡ್ಡ ಗಣಿ ಮಾಲೀಕರು ಮಣ್ಣು ಹಾಕಿರುವುದುನ್ನು ಗಮನಿಸಿದರು. ದಾರಿಗೆ ಅಡ್ಡಲಾಗಿ ಹಾಕಿರುವ ಮಣ್ಣು ಹತ್ತಿ, ನಡೆದುಕೊಂಡು ಹೋಗಿಯೇ ಗಣಿ ವೀಕ್ಷಿಸಿದರು. ಸಂಸದೆ ಸುಮಲತಾ ಅವರೊಂದಿಗೆ ಜಿಲ್ಲಾಧಿಕಾರಿ ಅಶ್ವತಿ, ಜಿಲ್ಲಾ ಗಣಿ ಅಧಿಕಾರಿ ಪದ್ಮಜಾ ಸೇರಿ ಹಲವರು ಉಪಸ್ಥಿತರಿದ್ದರು.
(Sumalatha Warns Mining Department Officials About Chennanakere Mining)
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ ಖುದ್ದು ‘ಟಾರ್ಗೆಟ್’ ಭೇಟಿ; ಜೆಡಿಎಸ್ ದಳಪತಿಗಳು ಸಿಡಿಮಿಡಿ
Published On - 5:12 pm, Wed, 7 July 21